ಕುಡಿಯುವ ನೀರಿಗೆ ನೆಪ ಹೇಳಬೇಡಿ
ಕ.ಪ್ರ. ವಾರ್ತೆ ತುಮಕೂರು ಜೂ.17
ಯಾವುದೇ ಗ್ರಾಮಕ್ಕೆ ಹೋದರೂ ಕುಡಿಯುವ ನೀರಿನ ಸಮಸ್ಯೆ ಇದೆ. ಚುನಾವಣೆ ನೀತಿಸಂಹಿತೆಯ ನೆಪ ಹೇಳಿ ಇಷ್ಟುದಿನ ತಪ್ಪಿಸಿಕೊಂಡು ಒಡಾಡಿವೆ. ಈಗ ಹೇಳಲು ಏನು ಕಾರಣವಿಲ್ಲ. ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಎಲ್ಲಾ ಸದಸ್ಯರು ಒಕ್ಕರಲಿನಿಂದ ಆಗ್ರಹಿಸಿದರು.
ಜಿ.ಪಂ.ಸಭಾಂಗಣದಲ್ಲಿ ಸೋಮವಾರ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ನೀರಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಿಕ್ಕ ಅವಕಾಶ ಬಳಸಿಕೊಂಡರು.
ಸದಸ್ಯರು ಪ್ರಶ್ನೆಗಳ ಸುರಿಮಳೆ ಮಾಡಿದರೇ ಹೊರತು ಅದಕ್ಕೆ ಉತ್ತರ ಮಾತ್ರ ಸಿಗುತ್ತಿರಲಿಲ್ಲ. ಆದರೂ ನಿರಂತರವಾಗಿ 2 ಗಂಟೆಗಳ ಕಾಲ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಅಭಾವದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಾಗಿದ್ದ ಸಭೆ ಕೋರಂ ಕೊರತೆಯಿಂದ 11.50ಕ್ಕೆ ಆರಂಭವಾಯಿತು. ಸಭೆ ಆರಂಭವಾದ ಕೂಡಲೇ ಮಾಜಿ ಅಧ್ಯಕ್ಷ ಆನಂದರವಿ ತಿಪಟೂರು ತಾಲೂಕಿನಲ್ಲಿ ತಲೆದೂರಿರುವ ನೀರಿನ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.
ಕುಡಿಯು ನೀರಿಗೆ ಸಂಬಂಧಿಸಿದ ಚರ್ಚೆಯಲ್ಲಿ ಸದಸ್ಯರಾದ ಜಾನಮ್ಮ, ಲೋಹಿತಾಬಾಯಿ, ಚಂದ್ರಶೇಖರಬಾಬು, ಸಿ.ಆರ್. ಉಮೇಶ್, ವೈ.ಎಚ್. ಹುಚ್ಚಯ್ಯ ಬಡೀರಪ್ಪ, ಪಂಚಾಕ್ಷರಿ ಮುಂತಾದವರು ಪಾಲ್ಗೊಂಡಿದ್ದರು.
ತಾಲೂಕಿನ 17 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಿದೆ. ಆದರೆ, ಕಳೆದ ವರ್ಷ ನೀರು ಹೊಡೆದ ಟ್ಯಾಂಕರ್ ದುಡ್ಡು ಬಿಡುಗಡೆಯಾಗಿಲ್ಲ ಎಂದು ಗ್ರಾ.ಪಂ.ಗಳು ನೀರು ಸರಬರಾಜು ಮಾಡದೇ ಕೈಚೆಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರಗಳಿಗೆ ತೆರಳುವುದು ನಮಗೆ ಕಷ್ಟವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಾವಗಡದ 235 ಹಳ್ಳಿಗಳಲ್ಲಿ ಶುದ್ಧ ನೀರಿಲ್ಲ: ಪಾವಗಡ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಪತ್ತೆಯಾಗಿದೆ. ಇಂತಹ ನೀರನ್ನು ಅಂಗನವಾಡಿ ಮತ್ತು ಶಾಲೆಯಲ್ಲಿ ಮಕ್ಕಳು ಕುಡಿಯುತ್ತಿರುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಈ ಹಿಂದೆ ನಡೆದ ಜಿ.ಪಂ.ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ನಿರ್ದೇಶನ ನೀಡಿದ್ದರೂ ಡಿಪ್ಲೋರೈಡ್ ಘಟಕ ಸ್ಥಾಪಿಸುವಲ್ಲಿ ಅಧಿಕಾರಿ ನಿರ್ಲಕ್ಷ್ಯ ತೋರಿಸಿದ್ದಾರೆ. ಈ ಬಗ್ಗೆ ಈ ಸಭೆಯಲ್ಲಿಯೇ ಮಾಹಿತಿ ನೀಡುವಂತೆ ಸದಸ್ಯ ಆರ್.ಸಿ.ಅಂಜನಪ್ಪ ಆಗ್ರಹಿಸಿದರು.
ಪ್ಲೋರೈಡ್ ಸಮಸ್ಯೆ ಇರುವ ಗ್ರಾಮಗಳ ಅಂಗನವಾಡಿ, ಶಾಲೆಗಳಲ್ಲಿ ವಾಟರ್ ಫಿಲ್ಟರ್ ಅಳವಡಿಸಿ ಮಕ್ಕಳಿಗೆ ಶುದ್ಧ ನೀರು ಲಭ್ಯವಾಗುವಂತೆ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಸಲಹೆ ನೀಡಿದರು.ಪೈಪು, ಮೋಟರ್ ಪತ್ತೆ ಮಾಡಿ: ಮೊನ್ನೆಯ ಕೆಡಿಪಿ ಸಭೆಯಲ್ಲಿ ಬಹಿರಂಗವಾಗಿರುವ ಮೋಟರ್ ಪಂಪ್, ಪೈಪುಗಳ ಐದು ಕೋಟಿ ಹಗರಣದಿಂದ ಜಿ.ಪಂ.ಸದಸ್ಯರನ್ನು ಜನ ಅನುಮಾನದಿಂದ ನೋಡುವಂತಾಗಿದೆ.
ಈ ಬಗ್ಗೆ ಸೂಕ್ತವಾದ ತನಿಖೆಗೆ ನಡೆಸಬೇಕು. ಗ್ರಾ.ಪಂ.ಗಳಲ್ಲಿ ನಡೆದಿರುವ ಅವ್ಯವಹಾರದಿಂದ ಜಿ.ಪಂ. ಸದಸ್ಯರು ಜನರ ನಿಂದನೆಗೆ ಗುರಿಯಾಗುವಂತಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ತನಿಖೆ ನಡೆಸಿ ಎಂದು ಸದಸ್ಯ ಸಿ.ಆರ್. ಉಮೇಶ್, ಬಡೀರಪ್ಪ ಸಭೆಯಲ್ಲಿ ಒತ್ತಾಯಿಸಿದರು.
ಟೈಮ್ಪಾಸ್ಗೆ ಸಭೆ ಬೇಡ, ಹಣ ನೀಡಿ: ಪ್ರತಿ ಸಭೆಯಲ್ಲಿ ಚರ್ಚೆ ನಡೆಯುತ್ತದೆ ಹೊರತು, ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ. ಜಿಲ್ಲೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಅಧಿಕಾರಿಗಳು ಜನರ ಸಮಸ್ಯೆಯ ಬಗ್ಗೆ ಗಂಭೀರವಾಗಿ ಗಮನ ನೀಡುತ್ತಿಲ್ಲ.
ಜನರ ಸಮಸ್ಯೆಯನ್ನು ಪರಿಹರಿಸಲಾಗದ ಇಂತಹ ಸಭೆಯಿಂದ ಆಗುವ ಪ್ರಯೋಜನವೇನು, ಟೈಮ್ಪಾಸ್ಗೆ ಸಭೆ ಬೇಡ ಎಂದು ಸದಸ್ಯೆ ಜಾನಮ್ಮ, ಪಂಚಾಕ್ಷರಿ ಪ್ರಶ್ನಿಸಿದರು.
ಸರ್ಕಾರದ ಬರಪರಿಹಾರ ನಿಧಿ ಜಿಲ್ಲಾಧಿಕಾರಿಗಳ ಖಾತೆಗೆ ಬಂದಿದೆ. ಚರ್ಚೆ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದೆ. ನಾವು ಎಷ್ಟೇ ಚರ್ಚೆ ನಡೆಸಿದರೂ ಹಣ ನೀಡಬೇಕಾದ ಜಿಲ್ಲಾಧಿಕಾರಿಗಳು ಇಲ್ಲದಿದ್ದರೆ ಅದು ವ್ಯರ್ಥವಾಗುತ್ತದೆ. ಕುಡಿಯುವ ನೀರಿನಂತಹ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳನ್ನು ಸಭೆಗೆ ಕರೆಸಿ ಚರ್ಚೆ ಮಾಡುವುದು ಸೂಕ್ತ ಎಂದು ಸದಸ್ಯ ಬಡೀರಪ್ಪ ಸಲಹೆ ನೀಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ಡಾ. ರವಿನಾಗರಾಜಯ್ಯ ಮಾತನಾಡಿ, ಕ್ಷೇತ್ರದಲ್ಲಿ ಸರ್ಕಾರದ ಅನುದಾನ ಬಳಸುವಾಗ ಜಿ.ಪಂ.ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ಕೇವಲ ಶಾಸಕರು ಹೇಳಿದ ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯುವುದಾದರೆ ಜಿ.ಪಂ.ಸದಸ್ಯರ ಔಚಿತ್ಯವೇನು ಎಂದು ಪ್ರಶ್ನಿಸಿದರು. ನಮ್ಮನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಸದಸ್ಯರು ಆಗ್ರಹಿಸಿದರು.