ಮಕ್ಕಳನ್ನು ಸ್ಪರ್ಧೆಗಿಳಿಸಬೇಡಿ: ಕವಿತಾಕೃಷ್ಣ
ತುಮಕೂರು: ಪೋಷಕರು, ಮಕ್ಕಳನ್ನು ಜೂಜಿನ ಕುದುರೆಯಂತೆ ಅಂಕ ಗಳಿಸುವ ಸ್ಪರ್ಧೆಗೆ ಇಳಿಸುವುದು ಬೇಡ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಸಲಹೆ ನೀಡಿದರು.
ಅವರು ನಗರದ ಕ್ಯಾತ್ಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮಕ್ಕಳ ಸಾಹಿತ್ಯ ಕೂಟ ಏರ್ಪಡಿಸಿದ್ದ ಎಸ್ಎಸ್ಎಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳನ್ನು ಹಣಗಳಿಸಲೆಂದೇ ಓದಿಸಬಾರದು. ಸದ್ಗುಣವಂತರಾಗಲು ಪ್ರೇರೇಪಿಸಬೇಕು. ಅಂಕಗಳಿಕೆ ಪೈಪೋಟಿಯಲ್ಲಿ ನೈತಿಕತೆ ಶೂನ್ಯವಾಗಿದೆ. ಮಮಕಾರರಹಿತ ಮಕ್ಕಳಿಂದ ತಾಯಿ, ತಂದೆಯವರು ಅನಾಥಾಲಯ ಹುಡುಕಬೇಕಾಗುತ್ತದೆ. ಈ ನಾಗಾಲೋಟದ ಶಿಕ್ಷಣ ಪದ್ಧತಿಯಿಂದ ಇಡೀ ಭಾರತವೇ ಒಂದು ಅನಾಥಾಶ್ರಮವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕವಯತ್ರಿ ಜಯಲಕ್ಷ್ಮೀಗುಪ್ತ ಅವರು ಮಕ್ಕಳು ಕೂಡಿ ಬಾಳುವ, ಕೂಡಿ ದುಡಿಯುವ, ಕೂಡಿ ಉಣ್ಣುವ ಗುಣಧರ್ಮ ಬೆಳೆಸಿಕೊಳ್ಳಬೇಕು. ಶಿಕ್ಷಣ ಇರುವುದು ವಿಶ್ವ ಕಲ್ಯಾಣಕ್ಕೆ ಎಂದು ನುಡಿದರು.
ಮಹಾತ್ಮರಾಗಬೇಕು: ಅಭಿನಂದನಾ ನುಡಿಗಳನ್ನಾಡಿದ ಖ್ಯಾತ ಲೇಖಕಿ ಪದ್ಮಾಕೃಷ್ಣಮೂರ್ತಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳು ಏಕಾಂತರಾಗಬಾರದು. ಎಲ್ಲರೊಳಗೊಂದಾಗಿ ಬಾಳುವ, ಬಾಳಿ ಲೋಕಕಲ್ಯಾಣಕ್ಕೆ ಶ್ರಮಿಸಿದ ಮಹಾತ್ಮರಾಗಬೇಕು ಎಂದರು.
ಆರ್ಟ್ ಆಫ್ ಲಿವಿಂಗ್ನ ಗುರುಮಾತೆ ಲಕ್ಷ್ಮೀ ಅಯ್ಯಂಗಾರ್ ಮಾತನಾಡಿ ವಿದ್ಯಾರ್ಥಿ ಓರ್ವ ಗೌರವ ತಪಸ್ವಿ. ಭಾರತೀಯತೆ ಮೈಗೂಡಿಸಿಕೊಂಡು ಬಾಳಲು ಕರೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಲೇಖಕಿ ಕಲಾಶ್ರೀ, ಕೆಜಿಎಲ್ ರವಿ, ಬಸವರಾಜ್ ಮಾತನಾಡಿದರು. ವೀಣಾ, ತನು ಅರವಿಂದ್, ನಿತಿನ್, ಚಿನ್ನು ಹಾಜರಿದ್ದರು. ಕೂಟದ ಪರವಾಗಿ ಹತ್ತು ಮಂದಿ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಪದಕ ಹಾಕಿ, ಕನ್ನಡ ಶ್ರೀ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಲೇಖಕಿ ಕಮಲಾ ಬಡ್ಡಿಹಳ್ಳಿಯವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾನವ ಜನ್ಮ ಬಹು ಶ್ರೇಷ್ಠ. ಅದರಲ್ಲೂ ವಿದ್ಯಾರ್ಥಿ ಜೀವನ ಅತ್ಯಂತ ಶ್ರೇಷ್ಠ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಪ್ರತಿಭಾವಂತರಾದರೆ ಬದುಕು ಸಾರ್ಥಕ. ಪ್ರತಿಭಾ ಪಲಾಯನ ಮಾಡದೇ ದೇಶ, ಭಾಷೆ, ಸಂಸ್ಕೃತಿ ರಕ್ಷಿಸಿ ಎಂದು ಕರೆ ನೀಡಿದರು.
ಮಂಜುಳಾದೇವಿ ಪ್ರಾರ್ಥಿಸಿದರು. ಲೇಖಕಿ ಪಾವಗಡ ಸಣ್ಣರಂಗಮ್ಮ ಸ್ವಾಗತಿಸಿದರು. ಉಮಾಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಾಪುರ ನರಸಿಂಹಯ್ಯ ವಂದಿಸಿದರು. ಸುರೇಶ್ ಅಬ್ಬಿನಹೊಳೆ ನಿರೂಪಿಸಿದರು.