ಕನ್ನಡದ ತೇರನೆಳೆಯಲು ಸಜ್ಜಾದ ಕಲಾವಿದರು
ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿರುವ ಕಲೆಗಳಿಗೆ ಜೀವ ತುಂಬುವ ವೇದಿಕೆಯಾಗಲಿರುವ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ತಾಲೂಕಿಗೆ ಜಿಲ್ಲಾ ಸಾಹಿತ್ಯ ಪರಿಷತ್ ನೀಡಿರುವ ಕೊಡುಗೆ ಎಂದು ಕುಂಚಾಂಕುರ ಕಲಾ ಸಂಘದ ಗೌರವಾಧ್ಯಕ್ಷರಾದ ಸಿದ್ದು. ಜಿ.ಕೆರೆ ನುಡಿದರು. ಅವರು ಕನ್ನಡ ಸಂಘದ ವೇದಿಕೆಯಲ್ಲಿ 10 ದಿನಗಳಕಾಲ ಕುಂಚಾಂಕುರ ಕಲಾ ಸಂಘದಿಂದ ಏರ್ಪಡಿಸಿದ್ದ ಸ್ಥಳದಲ್ಲೇ ಚಿತ್ರರಚನೆ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ತಾಲೂಕಿನಲ್ಲಿ ಜೀವತಳೆದಿರುವ ಕಲೆಗಳಿಗೆ ಸೂಕ್ತ ವೇದಿಕೆಯಿಲ್ಲದಿರುವ ಕೊರಗು ಬಹಳ ದಿನಗಳಿಂದ ಕಾಡುತ್ತಿತ್ತು. ಅದನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನ ಹೋಗಲಾಡಿಸಿದೆ. ಇಲ್ಲಿ ಶಿಲ್ಪಕಲೆಯಲ್ಲಿ ವಾದಿರಾಜ ಪ್ರಶಸ್ತಿ, ನಾಡೋಜ ಪ್ರಶಸ್ತಿ ಪಡೆದ ಪ್ರತಿಭಾವಂತರಿದ್ದಾರೆ. ಅಂತಹ ಪ್ರತಿಭಾನ್ವಿತರನ್ನು ಬೆಳಕಿಗೆ ತರಲು ವೇದಿಕೆಯನ್ನು ಒದಗಿಸಿ ಕನ್ನಡ ಸಾಹಿತ್ಯ ಪರಿಷತ್ ಸ್ಮರಣೀಯವಾಗಿದೆ ಎಂದರು.
ಕಲಾವಿದರ ಕೈಚಳಕ: ಕುಂಚಾಂಕುರ ಕಲಾ ಸಂಘದ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಮಾತನಾಡಿ ಇಂದಿನ ಚಿತ್ರಕಲೆಯಲ್ಲಿ ಕಲಾವಿದರು ಪ್ರಚಲಿತ ವಿದ್ಯಮಾನಗಳಿಗೆ ಜೀವತುಂಬಿದ್ದಾರೆ. ಇಂದು ಪ್ರತಿನಿತ್ಯ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮಗ್ಗಲ ಮುಳ್ಳಾಗಿರುವ ತಮಿಳುನಾಡಿನ ರಾಜಕಾರಣಿಗಳು, ರಾಜ್ಯದ ಪರ ನ್ಯಾಯ ಒದಗಿಸಲಾರದ ದೈನೇಸಿ ಸ್ಥಿತಿಯಲ್ಲಿರುವ ಕರ್ನಾಟಕದ ರಾಜಕಾರಣಿಗಳು, ತನ್ನ ಸ್ಥಿತಿಗೆ ತಾನೇ ದುಃಖಿಸುತ್ತಿರುವ ಕಾವೇರಿ ಮಾತೆಯ ಚಿತ್ರದಲ್ಲಿ ಕಲಾವಿದ ತನ್ನ ಕೈಚಳಕವನ್ನು ಮೆರೆದಿದ್ದಾನೆ. ಇಲ್ಲಿ ಕೇಂದ್ರಸರ್ಕಾರದ ದ್ವಿಮುಖ ನೀತಿಯನ್ನು ಸಹ ಬಿಂಬಿಸಿದ್ದು, ಜನಸಾಮಾನ್ಯರಿಗೂ ಅರ್ಥವಾಗುವಂತಿದೆ ಎಂದರು. ಸಮಾರೋಪ ಭಾಷಣ ಮಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ರವಿಕುಮಾರ್ ಕನಸುಗಳು ಮನುಷ್ಯನನ್ನು ಬೆಳೆಸುತ್ತವೆ. ಇದರ ಜೊತೆಗೆ ಕೆಲವು ಹುಚ್ಚು ಹವ್ಯಾಸಗಳಿದ್ದರೆ ಜೀವನ ಮಧುರವಾಗಿರುತ್ತದೆ. ಆಗ ಮನುಷ್ಯ ಸದಾ ಚಟುವಟಿಕೆಯಿಂದ ಕೂಡಿರುತ್ತಾನೆ. ಸಂಸ್ಕೃತಿ ವಿಕಾಸ, ನಾಗರಿಕತೆ ಸವಾಲಿನ ಮಧ್ಯೆ ದಾರಿ ಹುಡುಕುವುದು ಹೊಸ ವಿಷಯಗಳ ಅನ್ವೇಷಕನ ತಾಕತ್ತು. ಅದನ್ನು ಇಲ್ಲಿನ ಕುಂಚಾಂಕುರ ಕಲಾಸಂಘದ ಗೆಳೆಯರು ಯಶಸ್ವಿಯಾಗಿ ಮಾಡಿದ್ದಾರೆ. ಸಾಹಿತ್ಯ ಪರಿಷತ್ ಅವರ ಸಾಧೆಯನ್ನು ಗೌರವಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ನಿರೂಪರಾವತ್ ನಿರೂಪಿಸಿದರು. ಕವಿಯಿತ್ರಿ ಪುಷ್ಪಶಿವಣ್ಣ, ನಂದೀಶ್ ಬಟ್ಲೇರಿ, ಹೋಬಳಿ ಪರಿಷತ್ ಅಧ್ಯಕ್ಷ ರಾಮಣ್ಣ,ಮುಂತಾದವರಿದ್ದರು.
ಲೋಕಾಯುಕ್ತರ ಭೇಟಿ ಇಂದು
ಕೊರಟಗೆರೆ: ತುಮಕೂರು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಜೂ. 19 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೊರಟಗೆರೆಯ ತಾ.ಪಂ. ಸಮುದಾಯ ಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಲು ಜನಸಂಪರ್ಕ ಸಭೆ ನಡೆಸಲಿದ್ದಾರೆ.