ಮನೆ ಬಳಿ ಬೇಟೆಗೆ ಬಂದು ರಾದ್ಧಾಂತ ಸೃಷ್ಟಿಸಿದ ಚಿರತೆ ಸೆರೆ
ಕುಣಿಗಲ್: ಬೇಟೆಗಾಗಿ ಮನೆಯೊಂದರ ಬಳಿ ಸಾಕು ನಾಯಿಯನ್ನು ಬೇಟೆಯಾಡಲು ಬಂದು ಆತಂಕ ಸೃಷ್ಟಿಸಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸತತ 12 ಗಂಟೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿಯ ನಾಗನಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ನಾಗನಹಳ್ಳಿ ಗ್ರಾಮದ ಮೃತ್ಯುಂಜಯಚಾರ್ ಹಾಗೂ ಭಾಸ್ಕರಾಚಾರ್ ಸಹೋದರರ ಮನೆ ಬಳಿ ಮಂಗಳವಾರ ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಸಾಕು ನಾಯಿ ಜೋರಾಗಿ ಕೂಗಲು ಶುರು ಮಾಡಿದೆ. ನಾಯಿಯ ಕಿರುಚಾಟದಿಂದ ಎಚ್ಚರಗೊಂಡ ಭಾಸ್ಕರಾಚಾರ್ ಹೊರಬಂದು ನೋಡಿದಾಗ ಸಾಕು ನಾಯಿ ಮನೆಯ ಮುಂದಿನ ಸ್ನಾನದ ಕೋಣೆಯಲ್ಲಿ ಚಿರತೆ ಜತೆ ಸೆಣಸಾಡುತ್ತಿತ್ತು. ಇದರಿಂದ ಗಾಬರಿಗೊಂಡ ನಾಯಿಯನ್ನು ಬಿಡಿಸಲು ಮುಂದಾದಾಗ ಚಿರತೆ ಮನೆಯೊಳಗೆ ನುಗ್ಗಿತು. ಗಲಾಟೆಯಿಂದ ಎಚ್ಚೆತ್ತ ಕುಟುಂಬ ಸದಸ್ಯರು ಚಿರತೆ ಒಳ ಪ್ರವೇಶಿಸಿದ್ದು ಕಂಡು ಹೊರಬಂದಿದ್ದಾರೆ. ಬಳಿಕ ಮುಂಬಾಗಿಲು ಬಂದ್ ಮಾಡಿ ಚಿರತೆಯನ್ನು ಒಳಗೆ ಕೂಡಿ ಹಾಕಿ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಚಿನ್ನಪ್ಪ ಹಾಗೂ ಸಿಬ್ಬಂದಿ ಚಿರತೆ ಹಿಡಿಯಲು ಯತ್ನಿಸಿದಾಗ ಮನೆಯೊಳಗೆ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಹಾರಿದೆ. ನಂತರ ಮನೆಯ ಹಿಂಭಾಗದ ಕೊಟ್ಟೆಗೆಯಲ್ಲಿದ್ದ ಎರಡು ಕುರಿ, ಮೂರು ಮೇಕೆಯ ಮೇಲೆಯೂ ದಾಳಿ ನಡೆಸಿತು.