ಮಹಿಳೆಯರ ಸಬಲತೆಗೆ ಸಹಕಾರ ಸಂಘಗಳ ಪಾತ್ರ ಹಿರಿದು
ಕ.ಪ್ರ. ವಾರ್ತೆ ತುರುವೇಕೆರೆ ಜೂ.18
ಇಂದು ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರ ಸಂಘಗಳು ಪ್ರಮುಖ ಕಾರಣವಾಗಿದೆ. ಸಹಕಾರ ಸಂಘ ಹಾಗೂ ವಿವಿಧ ಸಂಘಗಳ ಮೂಲಕ ಮಹಿಳೆಯರು ಪಡೆದ ಸಾಲವನ್ನು ಬುದ್ಧಿವಂತಿಕೆಯಿಂದ ತಿರುವಳಿ ಮಾಡುವ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಲ್ಲದೇ ಬ್ಯಾಂಕಿನ ಅಭಿವೃಧ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ತಾಲೂಕಿನ ದಂಡಿನಶಿವರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜಿಲ್ಲಾ ಸಹಕಾರ ಸಂಘದ ಶಾಖಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ದೇಶದಲ್ಲೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾದರಿ ಬ್ಯಾಂಕ್ ಎಂದು ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ನಬಾರ್ಡ್ನಿಂದಲೂ ಸಹ ಪ್ರಶಂಸೆ ಪಡೆಯಲು ಬ್ಯಾಂಕ್ನ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ಅವರ ಸಹದ್ಯೋಗಿಗಳ ಶ್ರಮವಿದೆ ಎಂದರು. ಮಹಿಳೆಯರು ಪಡೆದಿರುವ ಸಾಲದಲ್ಲಿ ಶೇಕಡಾ 98 ರಷ್ಟು ಹಣ ವಸೂಲಾಗುತ್ತಿರುವುದು ಸಾಧನೆಯೇ ಸರಿ. ಜಿಲ್ಲೆಯಲ್ಲಿರುವ ಸುಮಾರು 5 ಲಕ್ಷ ರೈತರಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸಣ್ಣ ಹಿಡುವಳಿದಾರರಿಗೆ ಸಾಲ ಸೌಲಭ್ಯ ಕಲ್ಪಿಸಿದ ಕೀರ್ತಿ ಡಿಸಿಸಿ ಬ್ಯಾಂಕ್ಗೆ ಇದೆ ಎಂದರು.
ಸಮಸ್ಯೆ: ರೈತರ ಬಡ್ಡಿ ಹಾಗೂ ಸಾಲ ಮನ್ನಾ ಕಾರ್ಯಕ್ರಮದಲ್ಲಿ ಹಲವಾರು ಸಹಕಾರಿ ಬ್ಯಾಂಕ್ಗಳಿಗೆ ಇನ್ನೂ ಸರ್ಕಾರದಿಂದ ಹಣ ಬಿಡುಗಡೆಯಾಗದೇ ಸಮಸ್ಯೆಯಾಗಿದೆ. ಇಂತಹ ಬ್ಯಾಂಕ್ಗಳನ್ನು ಗುರುತಿಸಿ ಶೀಘ್ರದಲ್ಲೇ ಸರ್ಕಾರದಿಂದ ಹಣ ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ಜಯಚಂದ್ರ ಭರವಸೆ ನೀಡಿದರು. ಮಧ್ಯವರ್ತಿಗಳ ಕಾಟದಿಂದ ತೊಂದರೆ ಅನುಭವಿಸುತ್ತಿದ್ದ ರೈತರ ಕಷ್ಟವನ್ನು ಮನಗೊಂಡ ಸರ್ಕಾರ ನ್ಯಾಫೆಡ್ ತೆರೆದಿದೆ. ಬಡ ಜನರಿಗೆ ಜುಲೈ 1 ರಿಂದ 1 ರು.ಗೆ 1 ಕೆಜೆ ಅಕ್ಕಿ ಕೊಡುವ ಕಾರ್ಯಕ್ರಮ ಜಾರಿಯಾಗಲಿದೆ.
ಅದಕ್ಕೆ ಯಾವುದೇ ಅನುಮಾನ ಬೇಡ ಎಂದರು. ತಮ್ಮ ಸರ್ಕಾರ ಎಂದೆಂದೂ ಬಡವರ ಪರ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಪ್ರತಿಪಾದಿಸಿದ್ದಾರೆ ಎಂದು ಜಯಚಂದ್ರ ಹೇಳಿದರು.
10 ಕೋಟಿ ರು. ಲಾಭ: ಕೇಂದ್ರ ಬ್ಯಾಂಕ್ ಇಂದು ಪ್ರತಿವರ್ಷ ಕನಿಷ್ಠ ವೆಂದರೂ 10 ಕೋಟಿ ರು.ಗಳ ಲಾಭದಲ್ಲಿದೆ. ಈ ಹಿಂದೆ ಡಿ ಸಿ ಸಿ ಬ್ಯಾಂಕ್ ಎಂದರೆ ಮೂಗು ಮುರಿಯವ ಕಾಲವಿತ್ತು. ಆದರೆ ಇಂದು ಕೇಂದ್ರ ಸಹಕಾರಿ ಬ್ಯಾಂಕ್ ಇಂದು ಎಲ್ಲಾ ವಾಣಿಜ್ಯ ಬ್ಯಾಂಕ್ ಗಳಿಗಿಂತ ಹೆಚ್ಚು ಮುಂದುವರೆದಿದೆ ಎಂದು ಜಿಲ್ಲಾ ಬ್ಯಾಂಕ್ನ ಅಧ್ಯಕ್ಷ ಹಾಗೂ ಶಾಸಕ ಕೆ.ಎನ್.ರಾಜಣ್ಣ ಹೇಳಿದರು. ಜಿಲ್ಲೆಯಲ್ಲಿನ ನಮ್ಮ ಬ್ಯಾಂಕ್ನ ಹಲವಾರು ಶಾಖೆಗಳು ಕೋರ್ ಬ್ಯಾಂಕ್ಗಳಾಗಿ ಮಾರ್ಪಾಟಾಗಿ ದೇಶದಲ್ಲೇ ವೈಷಿಷ್ಟ್ಯಪೂರ್ಣ ಬ್ಯಾಂಕ್ಗಳಾಗಿ ಹೆಸರು ಮಾಡಿದೆ ಎಂದರು. ಸಮಾಜದಲ್ಲಿ ನಿರ್ಲಕ್ಕೆ ಒಳಗಾಗಿದ್ದ ಮಹಿಳೆಯರು ಹಾಗೂ ಸಣ್ಣ ಹಿಡುವಳಿದಾರರಿಗೆ ಸಾಲ ನೀಡುವ ಮೂಲಕ ಉತ್ತೇಜನ ಮಾಡಿದ ಪರಿಣಾಮ ಇಂದು ಸಣ್ಣ ಹಿಡುವಳಿದಾರರೂ ಸಹ ಹಾಳಾಗಿದ್ದ ಜಮೀನಿನಲ್ಲಿ ಬೆಳೆ ಬೆಳೆದು ಆರ್ಥಿಕವಾಗಿ ಮುಂದುವರೆಯಲು ಸಹಕಾರಿಯಾಗಿದೆ ಎಂದರು.
ಗಣಕೀಕರಣ: ಜಿಲ್ಲಾ ಸಂಸದ ಜಿ.ಎಸ್.ಬಸವರಾಜು ಗಣಕೀಕರಣ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಸ್ಟ್ರಾಂಗ್ ರೂಂ ಅನ್ನು ಉದ್ಘಾಟಿಸಿದರು. ತಿಪಟೂರು ಶಾಸಕ ಕೆ.ಷಡಕ್ಷರಿ ಲಾಕರ್ಗಳನ್ನು ಉದ್ಘಾಟಿಸಿದರು. ಸಿಬ್ಬಂದಿಯ ವಸತಿ ಗೃಹವನ್ನು ಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ನ ತುರುವೇಕೆರೆ ಪ್ರತಿನಿಧಿ ನಿರ್ದೇಶಕ ಬಿ.ಎಸ್. ದೇವರಾಜು ಕ್ಯಾಷಿಯರ್ ಅವರ ಕೊಠಡಿ ಉದ್ಘಾಟಿಸಿದರು.
ಸಹಕಾರ ಸಂಘಗಳ ಜಂಟಿ ನಿಬಂದಕ ಟಿ.ವಿ.ನರಸಿಂಹಮೂರ್ತಿ, ಸಹಕಾರ ಸಂಘಗಳ ಉಪನಿಬಂದಕ ಹೆಚ್.ಬಾಲಶೇಖರ್, ತಾಲ್ಲೂಕು ಪಂಚಾಯ್ತಿ ಸದಸ್ಯೆ ಕಾವ್ಯ ರಾಜಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಾಂತರಾಜು, ಮೇಲ್ವಿಚಾರಕ ಎಚ್.ಬಿ.ಜಯರಾಮು, ದಂಡಿನಶಿವರ ವ್ಯವಸ್ಥಾಪಕ ಪರಪ್ಪ ಉಪಸ್ಥಿತರಿದ್ದರು. ವ್ಯವಸ್ಥಾಪಕರ ಕೊಠಡಿ ಉದ್ಘಾಟನೆ ಮಾಡಬೇಕಿದ್ದ ಶಾಸಕ ಎಂ.ಟಿ.ಕೃಷ್ಣಪ್ಪನವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ದಂಡಿನಶಿವರ ಗಂಗಾಧರಗೌಡ ಸ್ವಾಗತಿಸಿದರು. ಎಂ.ಎ.ಪರಮೇಶ್ ವಂದಿಸಿದರು.
ಪ್ರತಿಭಟನೆ: ದಂಡಿನಶಿವರ ಡಿಸಿಸಿ ಬ್ಯಾಂಕ್ನ ನೂತನ ಕಟ್ಟಡ ಕಟ್ಟಲು ಗ್ರಾಮ ಪಂಚಾಯ್ತಿಯ ಸಕಲ ಸೌಲಭ್ಯವನ್ನು ಪಡೆದ ಬ್ಯಾಂಕ್ನ ಆಡಳಿತ ಮಂಡಲಿ ಸೌಜನ್ಯಕ್ಕೂ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನಾಗಲೀ, ಸದಸ್ಯರನ್ನಾಗಲೀ ಸಮಾರಂಭಕ್ಕೆ ಆಹ್ವಾನ ನೀಡದೇ ಅವಮಾನ ಮಾಡಿದೆ ಎಂದು ಆರೋಪಿಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾಕಮ್ಮ, ಮಾಜಿ ಅಧ್ಯಕ್ಷ ಶಿವಕುಮಾರಸ್ವಾಮಿ, ಕುಮಾರ್, ಕೃಷ್ಣಪ್ಪ, ಜಯ್ಯಮ್ಮ ಹಾಗೂ ಇತರೆ ಸದಸ್ಯರು ಸಮಾರಂಭದಲ್ಲಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ಹಾಲು ಉತ್ಪಾದನಾ ಸಹಕಾರ ಸಂಘಗಳು ಬ್ಯಾಂಕ್ನಲ್ಲಿ ಲಕ್ಷಾಂತರ ರು. ವಹಿವಾಟು ಮಾಡುತ್ತಿದ್ದರೂ ಸಹ ಅವರನ್ನು ಕಡೆಗಣಿಸಿ ಸಮಾರಂಭ ಮಾಡಲಾಗಿದೆ ಎಂದು ಹಲವಾರು ರೈತರು ಸಹ ಆಕ್ರೋಶ ವ್ಯಕ್ತಪಡಿಸಿದರು.