ವರ್ಗಾವಣೆ ಬಯಸುವವರಿಂದ ಅರ್ಜಿ ಆಹ್ವಾನ
ಮಧುಗಿರಿ: 2013-14ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಬೋಧಕೇತರ ನೌಕರ ವೃಂದದ ವರ್ಗಾವಣೆ ಬಯಸುವ ಅಧಿಕಾರಿ-ನೌಕರರಿಂದ ಅರ್ಜಿಗಳನ್ನು ಜೂ 15 ರಿಂದ 19ರ ಒಳಗಾಗಿ ಸಲ್ಲಿಸುವಂತೆ ಡಿಡಿಪಿಐ ಆಂಜನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರ್ಗಾವಣೆ ಬಯಸುವ ನೌಕರರ-ಅಧಿಕಾರಿಗಳು ನಿಗಧಿತ ಅರ್ಜಿ ಮೂಲಕ ಜೂ. 19ರ ಒಳಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಉಪನಿರ್ದೇಶಕರ ಕಚೇರಿಗೆ ಅರ್ಜಿ ಮತ್ತು ಸಂಬಂಧಿಸಿದ ದಾಖಲೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ಸೈಟ್ ಅಥವಾ ಉಪನಿರ್ದೇಶಕರ ಕಚೇರಿ ಸಾ.ಶಿ.ಇಲಾಖೆ ಮಧುಗಿರಿ 08137 283477 ಸಹಾಯವಾಣಿ ಸಂಪರ್ಕಿಸಲು ಕೋರಿದ್ದಾರೆ.
ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರಂತೆ ದಾಳಿ ನಡೆಸಿದ ಕಳ್ಳರು
ತಿಪಟೂರು: ಪೊಲೀಸರಂತೆ ಬಂದು ಇಸ್ಪೀಟ್ ಅಡ್ಡದ ಮೇಲೆ ದಾಳಿ ಮಾಡಿ ಅವರಿಂದ ನಗದು, ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕಸಬಾ ಹೋಬಳಿ ಹುಚ್ಚನಹಟ್ಟಿ ಗ್ರಾಮದ ಪಕ್ಕದ ಹೊಲದಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನದ ಸಮಯದಲ್ಲಿ ಜೂಜುಕೋರರು ಹುಚ್ಚನಹಟ್ಟಿ ಗ್ರಾಮದ ಪಕ್ಕದಲ್ಲಿರುವ ಹೊಲದಲ್ಲಿ ಎಂದಿನಂತೆ ಇಸ್ಪೀಟ್ ಆಡುತ್ತಿದ್ದರು. ಅಲ್ಲಿಗೆ ಆಗಮಿಸಿದ ಕಳ್ಳರು ಪೊಲೀಸರಂತೆ ಬಂದು ಮಾರಕಾಸ್ತ್ರಗಳಿಂದ ಜೂಜುಕೋರರನ್ನು ಹೆದರಿಸಿ ಅವರಿಂದ ಹಣ ಮತ್ತು ಒಡವೆಯನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆಂದು ಇಲ್ಲಿನ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ತಾಲೂಕಿನ ನಗರಸಭಾ ವ್ಯಾಪ್ತಿಗೆ ಸೇರುವ ಹಳೇಪಾಳ್ಯ, ಕಲ್ಕೆಳೆ ಹಾಗೂ ಕಸಬಾ ಹೋಬಳಿಯ ಹುಚ್ಚನಹಟ್ಟಿ, ಮೀಸೆತಿಮ್ಮನಹಳ್ಳಿಗೆ ಸೇರುವಂತಹ ನಿರ್ಜನ ಪ್ರದೇಶದಲ್ಲಿ ಇಸ್ಪಿಟ್ ದಂಧೆ ಎಗ್ಗಿಲ್ಲದೆ ನಡೆಯುತ್ತಿರುವುದು ಪೊಲೀಸ್ ಇಲಾಖೆ ಗೊತ್ತಿದ್ದರೂ ಶಾಮೀಲಾಗಿದ್ದಾರೆಂಬ ದೂರು ಸಾರ್ವಜನಿಕರದ್ದಾಗಿದೆ.