ಕನ್ನಡ ಕಂಪನ್ನು ಹರಡಿ: ಶಾಸಕ ತಿಮ್ಮರಾಯಪ್ಪ ಕರೆ
ಪಾವಗಡ: ಸಮ್ಮೇಳನಾಧ್ಯಕ್ಷ ವಿ.ಆರ್. ಚಲುವರಾಜನ್ ಅಧ್ಯಕ್ಷತೆಯಲ್ಲಿ ಜೂ. 22ರಂದು ನಡೆಯುವ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಿಸ್ತು ಬದ್ಧತೆಯಿಂದ ರೂಪಿಸಿ ಕನ್ನಡ ಕಂಪನ್ನು ತಾಲೂಕಿನಲ್ಲಿ ಹರಡಿಸುವಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕರೆ ನೀಡಿದರು.
ಅವರು ಮಂಗಳವಾರ ತಾ.ಕಸಾಪ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ತಾಲೂಕಿನಲ್ಲಿ ತೆಲಗು ಪ್ರಭಾವವಿದ್ದು ಕನ್ನಡ ಕಂಪನ್ನು ಹರಡುವ ಮೂಲಕ ಪ್ರತಿ ಗ್ರಾಮದಲ್ಲಿ ಕನ್ನಡ ಮಾತನಾಡುವಂತಾಗಬೇಕು. ತಾಯಿ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ ನಂತರ ತೆಲಗು ಇತರೆ ಭಾಷೆಗಳಿಗೆ ಪ್ರಮುಖ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಕಸಾಪ ಸೇರಿದಂತೆ ಕನ್ನಡಪರ ಸಂಘಟನೆಗಳು ಕಾರ್ಯಪ್ರವ್ರತ ಆಗಬೇಕಿದೆ ಎಂದರು.
ಪಟ್ಟಣದಲ್ಲಿ ಜೂ. 22ರಂದು ನಡೆಯುವ 6ನೇ ತಾಲೂಕು ಕಸಾಪ ಸಮ್ಮೇಳನಕ್ಕೆ ಎಲ್ಲಾ ಇಲಾಖೆ ಮಟ್ಟದ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸುವಂತೆ ಆದೇಶಿಸಿದ ಶಾಸಕರು ಕಾರ್ಯಕ್ರಮವನ್ನು ಶಿಸ್ತು ಬದ್ಧತೆಯಿಂದ ರೂಪಿಸಿ ದೂರದಿಂದ ಆಗಮಿಸುವ ಅತಿಥಿಗಳಿಗೆ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದರು.
ಕಸಾಪ ಸಲಹಾ ಸಮಿತಿ ಅಧ್ಯಕ್ಷ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಟಿ. ಖಾನ್ ಮಾತನಾಡಿ ತಾ. ಕಸಾಪ ವತಿಯಿಂದ ಪಟ್ಟಣದ ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಸಾಪ ಅಧ್ಯಕ್ಷ ಅಂತರಗಂಗೆ ಶಂಕರಪ್ಪ ನೇತೃತ್ವದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ದಿವಂಗತ ಎಲ್.ಅಣ್ಣಯ್ಯಪ್ಪ ಹಾಗೂ ದಿ. ಸಾಹಿತಿ ಪಿ.ಕಾಂತರೆಡಿಡು ಎಂಬುವರ ಹೆಸರುಗಳಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಕಸಾಪ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧ್ಯಕ್ಷರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದು ಸಾಹಿತ್ಯಾಭಿಮಾನಿಗಳು ಕನ್ನಡಪರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ತಾ.ಕಸಾಪ ಅಧ್ಯಕ್ಷ ಅಂತರಗಂಗೆ ಶಂಕರಪ್ಪ ಸೇರಿದಂತೆ ಕಸಾಪದ ಎಲ್ಲಾ ಪದಾಧಿಕಾರಿಗಳಿದ್ದರು.