ಕಾಳಜಿಯಿಲ್ಲ, ನಿರ್ಣಯ ಮಂಡಿಸಿಲ್ಲ, ಒತ್ತಡ ಹಾಕಿಲ್ಲ
ತುಮಕೂರು: ವಾಟರ್‌ಗ್ರಿಡ್ ಕೆನಾಲ್ ಯೋಜನೆ ಜಾರಿ ಕುರಿತಂತೆ ಜಿಲ್ಲೆಯ ಶಾಸಕರ, ಜಿಲ್ಲಾ ಪಂಚಾಯತ್ ಸದಸ್ಯರ ನಡೆಗಳನ್ನು ನೋಡಿದರೆ ಮೇಲ್ನೋಟಕ್ಕೆ ಅವರಿಗೆ ಕಾಳಜಿಯಿಲ್ಲ ಎಂಬುದು ಗೋಚರಿಸುತ್ತದೆ. ಪ್ರತಿ ಜಿಪಂ ಸಭೆಯಲ್ಲಿ ಕುಡಿಯುವ ನೀರಿಗಾಗಿ ಕೂಗಾಡುವ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ವಾಟರ್‌ಗ್ರಿಡ್ ಕೆನಾಲ್ ಯೋಜನೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಿಲ್ಲ. ಯೋಜನೆ ಜಾರಿ ಕುರಿತಂತೆಜಿಪಂನಲ್ಲಿ ನಿರ್ಣಯ ಮಂಡಿಸಿ, ಸರ್ಕಾರಕ್ಕೆ ಕಳುಹಿಸುವುದರ ಮೂಲಕ ಗಮನ ಸೆಳೆದಿಲ್ಲ. ಒತ್ತಡವನ್ನೂ ಹಾಕಿಲ್ಲ. ಅದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದ ಕೆಡಿಪಿ ಸಭೆಗಳಾಗಿರಬಹುದು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಸತತವಾಗಿ 3 ದಿನ ನಡೆದ ಸಭೆಗಳಾಗಿರಬಹುದು. ವಾಟರ್‌ಗ್ರಿಡ್ ಕುರಿತಂತೆ ಚಕಾರವೆತ್ತದಿರುವುದು ಸೋಜಿಗದ ಸಂಗತಿಯೇ ಸರಿ.
ಸರ್ಕಾರದ ಮೇಲೆ ಒತ್ತಡ ತರುವ ಹಿನ್ನೆಲೆಯಲ್ಲಿ, ಯೋಜನೆ ಜಾರಿ ಕುರಿತಂತೆ ಜಿಪಂನಲ್ಲಿ ನಿರ್ಣಯ ಮಂಡಿಸಿ, ಸರ್ಕಾರಕ್ಕೆ ಕಳುಹಿಸಬಹುದು. ಆದರೆ ಈವರೆಗೆ ಈ ಕೆಲಸ ಆಗಿಲ್ಲ. ಇದನ್ನು ನೋಡಿದರೆ, ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಪರಮಶಿವಯ್ಯ ವರದಿಯಾಧಾರಿತ ವಾಟರ್‌ಗ್ರಿಡ್ ಯೋಜನೆ ಜಾರಿಗೆ ಎಷ್ಟರ ಮಟ್ಟಿಗೆ ಆಸಕ್ತಿಯಿದೆ, ಕಾಳಜಿಯಿದೆ ಎಂಬುದು ತಿಳಿಯುತ್ತದೆ.