ಕುಡಿವ ನೀರಿಗಾಗಿ 120ಕೋಟಿ ಬಿಡುಗಡೆ
ತಿಪಟೂರು: ತಾಲೂಕಿನ ಜ್ವಲಂತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ 2ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತರಲು 120 ಕೋಟಿ ರು. ಹಣ ಬಿಡುಗಡೆ ಮಾಡಿದ್ದು, ತಾಲೂಕಿನ ಎಲ್ಲಾ ಭಾಗಕ್ಕೂ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುವುದೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ನಗರಸಭಾ ಆವರಣದಲ್ಲಿ ಏರ್ಪಡಿಸಿದ್ದ 2012-13ನೇ ಸಾಲಿನ ಅಂಗವಿಕಲ ಕಲ್ಯಾಣ ಸೇವಾಭಿವೃದ್ಧಿ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ನೀಡುವ ಉಚಿತ ಸ್ಕೂಟರ್ ವಿತರಣಾ ಸಭೆಯಲ್ಲಿ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಪ್ರತಿ ಬಿಪಿಎಲ್ ಕಾರ್ಡ್ದಾರರಿಗೆ ರು. 1ರಂತೆ 30 ಕೆ.ಜಿ ಅಕ್ಕಿ ನೀಡಲಾಗುವುದು. ಆದರೆ ಬಿಪಿಎಲ್ ಕಾರ್ಡ್ನಲ್ಲಿ ಒಬ್ಬ ಸದಸ್ಯರಿದ್ದರೆ 10ಕೆಜಿ ಅಕ್ಕಿ, ಇಬ್ಬರಿದ್ದರೆ 20 ಕೆಜಿ ಹಾಗೂ 3ಕ್ಕೂ ಹೆಚ್ಚು ಸದಸ್ಯರಿದ್ದರೆ 30ಕೆಜಿ ಅಕ್ಕಿಯನ್ನು ಜುಲೈ 1ರಿಂದ ನೀಡಲಾಗುವುದು ಎಂದರು.
ಸರಿಪಡಿಸಿ: ತಾಲೂಕಿನ ಈ ಭಾಗದಲ್ಲಿ ಹರಿಯುವ ಶಿಂಷಾ ನದಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಗೆ ವಿಷಾದ ವ್ಯಕ್ತಪಡಿಸಿದ ಶಾಸಕರು ಬಡವರು ಮನೆಕಟ್ಟುವುದಕ್ಕೆ ಮರಳಿಲ್ಲಿದೆ ಕಂಗಾಲಾಗಿದ್ದಾರೆ. ಮರಳು ತಂದೆ ಅಧಿಕಾರಿಗಳು ದಂಡ ಕಟ್ಟಿಸಿಕೊಳ್ಳುತ್ತಾರೆಂದು ಕೆಲವರು ದೂರು ನೀಡಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು. ತಾಲೂಕಿನಲ್ಲಿ ರೇಷನ್ ಕಾರ್ಡ್ ಅವ್ಯವಸ್ಥೆಯನ್ನು ಶೀಘ್ರದಲ್ಲೇ ಬಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಅಂಗವಿಕಲ, ವೃದ್ಧಾಪ್ಯ, ವಿಧವಾ, ಮಾಸಾಶನ ವೇತನಗಳು ನಿಂತಿರುವುದರಿಂದ ಕಂಗಾಲಾಗಿರುವ ಫಲಾನುಭವಿಗಳಿಗೆ ಮತ್ತೆ ಮಾಸಾಶನ ನೀಡಲು ಫಲಾನುಭವಿಗಳಿಂದ ಅರ್ಜಿ ಪಡೆದು ಸರಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೊಬ್ಬರಿ ಬೆಲೆಯಿಲ್ಲದೆ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರಿಗೆ ಅನುಕೂಲವಾಗುವಂತೆ ತೆಂಗಿನಎಣ್ಣೆ ತಯಾರಿಕೆ ಅದನ್ನು ಅಡುಗೆಗೆ ಬಳಕೆ ಮಾಡುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಿ, ಪಡಿತರ ಜೊತೆ ತೆಂಗಿನ ಎಣ್ಣೆ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲಾಗಿದೆ ಎಂದರು.
ಪ್ರೋತ್ಸಾಹ ಧನ: ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳಾ ಸಂಘಗಳು ಹಾಗೂ ಸ್ವ-ಸಹಾಯ ಸಂಘಗಳು 1ಲಕ್ಷಕ್ಕೂ ಹೆಚ್ಚು ಉಳಿತಾಯ ಮಾಡಿದ್ದರೆ ಅಂತಹ ಸಂಘಗಳಿಗೆ 20ಸಾವಿರ ರು. ಪ್ರೋತ್ಸಾಹ ಧನ ನೀಡಲಾಗುವುದೆಂದು ಸಿಡಿಪಿಓ ತಿಳಿಸಿದರು. ಅರಣ್ಯ ಇಲಾಖೆ ವತಿಯಿಂದ ತಾಲೂಕಿನ ರಂಗಾಪುರದಲ್ಲಿ ಆನೆ ತುಳಿತಕ್ಕೊಳಗಾಗಿ ಆಕಸ್ಮಿಕ ಮರಣ ಹೊಂದಿದ್ದ ಲಚ್ಚಾನಾಯ್ಕ ಅವರಿಗೆ 5ಲಕ್ಷ ಸಹಾಯಧನ ಹಾಗೂ ಅರಣ್ಯಾ ವ್ಯಾಪ್ತಿಯಲ್ಲಿ ವಾಸವಾಗಿರುವ ತಿಮ್ಮೇನಹಳ್ಳಿ ಗ್ರಾಮದ ಎಸ್ಟಿ, ಎಸ್ಸಿ ಜನಾಂಗದ 24 ಕುಟುಂಬಗಳಿಗೆ ಸೋಲಾರ್ ಲ್ಯಾಂಡ್ಗಳನ್ನು ನೀಡಲಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಿಲ್ಪಾ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮಶಿವಯ್ಯ ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು ಭಾಗವಹಿಸಿದ್ದರು.