ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಡಿತರ ಚೀಟಿ ಗೊಂದಲ ನಿವಾರಣೆ: ಕಂದಾಯ ಇಲಾಖೆಗೆ ವಹಿಸಿ

Mainashree
Updated On : 20 Jun 2013, 12:00 pm

ಚಿಕ್ಕನಾಯಕನಹಳ್ಳಿ: ಪಡಿತರ ಚೀಟಿ ಗೊಂದಲ ನಿವಾರಣೆಯಾಗಬೇಕಾದರೆ ಅದನ್ನು ಕಂದಾಯ ಇಲಾಖೆಗೆ ವಹಿಸುವುದೇ ಸೂಕ್ತ ಎಂದು ತಾಪಂ ಅಧ್ಯಕ್ಷ ಶಶಿಧರ್ ನುಡಿದರು.
ಅವರು ತಾಪಂ ಸಭಾಂಗಣದಲ್ಲಿ ಕರೆದಿದ್ದ ಕುಡಿಯುವ ನೀರಿನ ಸಮಸ್ಯೆ ಮತ್ತು ಪಡಿತರ ಚೀಟಿ ಗೊಂದಲ ಪರಿಹಾರ  ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಪಡಿತರ ವ್ಯವಸ್ಥೆಯನ್ನು  ತಾಲೂಕು ಪಂಚಾಯ್ತಿಗೆ ವಹಿಸಿದ್ದಾರೆ. ಆದರೆ ಫಲಾನುಭವಿ ಗುರುತಿಸುವಿಕೆ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರದು. ಈ ವೈರುಧ್ಯದಿಂದಾಗಿ ಉಳ್ಳವರಿಗೆ ಅನಾಯಸವಾಗಿ ಪಡಿತರ ಚೀಟಿಗಳು ದೊರೆಯುತ್ತಿವೆ,ಬಡವರಿಗೆ ಮಾತ್ರ ಇನ್ನು ಸಿಕ್ಕಿಲ್ಲ, ಇದಕ್ಕೆ ಕಾರಣವೇನು ಎಂದು ಆಹಾರ ಶಿರಸ್ತೇದಾರ್ ಮಂಜುನಾಥ ಅವರನ್ನು ಪ್ರಶ್ನಿಸಿದಾಗ, ಫಲಾನುಭವಿಗಳು ತಮ್ಮ ಜಮೀನಿನ ಖಾತೆ ಹೊಂದಾಣಿಕೆ ಮಾಡಿಕೊಳ್ಳಲು ಗಡುವು ನೀಡಿದಾಗ ಅದನ್ನು ಫಲಾನುಭವಿಗಳು ಇಲಾಖೆಯ ಆದೇಶವನ್ನು ಪಾಲಿಸದ ಪರಿಣಾಮ ಅಂತಹವರ ಕಾರ್ಡ್‌ಗಳು ರದ್ದಾಗಿವೆ. ಇದರಲ್ಲಿ ನಮ್ಮ ಇಲಾಖೆ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.  ಮಧ್ಯೆ ಪ್ರವೇಶಿಸಿ ಮಾತನಾಡಿದ ಉಪಾಧ್ಯಕ್ಷ ಎ.ಬಿ.ರಮೇಶ್‌ಕುಮಾರ್, ಖಾತೆ ಹೊಂದಾಣಿಕೆ ಸೂಚನೆ ನೆಪಮಾತ್ರ, ಹಣಕೊಟ್ಟವರ ಕಾರ್ಡ್‌ಗಳು ಉಳಿದಿವೆ. ಹಣಕೊಡದ  ಬಡವರ ಕಾರ್ಡ್‌ಗಳು ರದ್ದಾಗಿವೆ ಎಂದು ಮೂದಲಿಸಿದರು.
ಸಹಕಾರಿಯಾಗಿತ್ತು:  ಕುಡಿಯುವ ನೀರು ಮತ್ತು ಪಡಿತರ ಅವ್ಯವಸ್ಥೆ ಬಗ್ಗೆ  ಆರೋಪ ಮಾಡಿದ ಬಹುತೇಕ ಗ್ರಾಮಪಂಚಾಯ್ತಿ ಅಧ್ಯಕ್ಷರು ಪಡಿತರ ವ್ಯವಸ್ಥೆ ಕಂದಾಯ ಇಲಾಖೆ ವಶದಲ್ಲಿದ್ದಾಗಲೇ ಜನರಿಗೆ ಸಹಕಾರಿಯಾಗಿತ್ತು. ಸಾಧಕ ಬಾಧಕಗಳಿಗೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬಹುದಿತ್ತು, ಆದರೆ ಈಗ ಕಾರ್ಡ್ ನೀಡುವುದು ಒಬ್ಬರಾದರೆ, ಅದರ ನಿರ್ವಹಣೆ ಮತ್ತೊಬ್ಬರದು. ಹೀಗಾಗಿ ಅಪ್ಪ ಅಮ್ಮ ಜಗಳದಲ್ಲಿ ಕೂಸುಬಡವಾಯುತ್ತು ಎಂಬಂತಾಗಿದೆ ಜನಸಾಮಾನ್ಯರ ಪರಿಸ್ಥಿತಿ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನಂತರ ಕುಡಿಯುವ ನೀರಿನ ಸಮಸ್ಯೆಯನ್ನು ಕೈಗೆತ್ತಿಕೊಂಡ  ಅಧ್ಯಕ್ಷ ಶಶಿಧರ್ ಮುಂದೆ  ಸಮಸ್ಯೆಯ  ಎತ್ತರ ಬೆಟ್ಟದಷ್ಟು. ಅಂತರ್ಜಲ ಕುಸಿದಿರುವ ಪರಿಣಾಮ ನೀರಿನ ಲಭ್ಯತೆಯಿಲ್ಲದೆ ಜನರಿಗೆ ನೀರು ಒದಗಿಸಲಾಗದ ಪರಿಸ್ಥಿತಿ ಒಂದೆಡೆಯಾದರೆ, ನೀರಿದ್ದೂ ಸಹ ವಿದ್ಯುತ್ ಹಾಗೂ ನೀರು ಸರಬರಾಜು ವ್ಯವಸ್ಥೆಯಲ್ಲಿನ ತೊಂದರೆಗಳಿಂದಾಗಿ ಜನರಿಗೆ ಸಮರ್ಪಕವಾಗಿ ನೀರೊದಗಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಗ್ರಾಮಪಂಚಾಯ್ತಿ ಅಧ್ಯಕ್ಷರು, ಅಂತರ್ಜಲ ಬತ್ತಿರುವ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ, ಹಿಂದೆ ಬಿಟ್ಟಿರುವ ಪೈಪುಗಳು ನೀರಿನ ಆಳ ತಲುಪುತ್ತಿಲ್ಲ, ಆದ್ದರಿಂದ ಪುನಃ ಹೆಚ್ಚುವರಿ ಪೈಪುಗಳನ್ನು ಕೊಳವೆ ಬಾವಿಗಳಿಗೆ ಬಿಡುವುದು ಸೇರಿದಂತೆ ಅವಶ್ಯಕತೆ ಇರುವಕಡೆ  ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆದರೆ ಮಾತ್ರ ಸಮಸ್ಯೆಗೆ  ಪರಿಹಾರ ಸಾಧ್ಯ ಎಂದರು. ಇನ್ನು ಕೆಲವರು ನೀರಿದ್ದರು ವಾಟರ್ ಮನ್‌ಗಳ ಧೋರಣೆಯಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ಎಲ್ಲಾ ಕಡೆ ವಾಟರ್‌ಮನ್‌ಗಳು ಸ್ಥಳೀಯರೇ ಆಗಿರುವುದರಿಂದ ಅವರು ದಬ್ಬಾಳಿಕೆ ಮಾಡುತ್ತಾರೆ. ಆದ್ದರಿಂದ ಅವರನ್ನು ಸ್ಥಳಾಂತರಿಸಬೇಕು ಎಂಬುದು ಕೆಲವರ ಸಲಹೆ.
ನೀರಿಲ್ಲ: ಜೆ.ಸಿ.ಪುರ ಪಂಚಾಯ್ತಿಯ ಹಾಲುಗೊಣ, ಗೋಡೇಕೆರೆ ಪಂಚಾಯ್ತಿಯ ತರಬೇನಹಳ್ಳಿ, ದುಗಡೀಹಳ್ಳಿ ಪಂಚಾಯ್ತಿಯ ಗೌಡನಹಳ್ಳಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಭಯಾನಕವಾಗಿದ್ದು, 1000 ಅಡಿ ಕೊರೆದರು ನೀರು ಲಭ್ಯವಾಗುತ್ತಿಲ್ಲ. ಕೆಲವೆಡೆ ನೀರು ಸಿಗುವ ಲಕ್ಷಣಗಳಿರುವ ಕಡೆ ಕೊರೆಯಲು ಹೋದರೆ ರೈತರು ತಮ್ಮ ನೀರಿನ ಮೂಲಕ್ಕೆ ಎಲ್ಲಿ ತೊಂದರೆಯಾಗುವುದೋ ಎಂದು ತಕರಾರು ತೆಗೆಯುತ್ತಾರೆ. ಕೆಲವೆಡೆ ನೀರು ಸಿಕ್ಕಿದ ಮೇಲೆ ನಮ್ಮ ಜಮೀನಿಗೆ ಸೇರುತ್ತದೆ ಎಂದು ಪಕ್ಕದ ಜಮೀನಿನವರು ಕ್ಯಾತೆ ತೆಗೆಯುತ್ತಾರೆ ಎಂದು ಅಧಿಕಾರಿಗಳು ತಮ್ಮ ಅಸಾಯಕತೆ ವ್ಯಕ್ತಪಡಿಸಿದರು.
ಒಟ್ಟಾರೆ ವರದಿಯನ್ನಾಧರಿಸಿ ನೋಡಿದರೆ ತಾಲೂಕಿನಲ್ಲಿ ಸುಮಾರು 96 ಹಳ್ಳಿಗಳಲ್ಲಿ ಕುಡಿಯುವ ನೀರಿನ  ಸಮಸ್ಯೆ ಆತಂಕಕಾರಿಯಾಗಿರುವುದು ಕಂಡುಬರುತ್ತದೆ.ಇದರ ಜೊತೆಗೆ ವರುಣನ ಅವಕೃಪೆ ಬೇರೆ ಕಾಡುತ್ತಿದೆ. ಇರುವ ನೀರನ್ನೇ ಜನರಿಗೆ ಒದಗಿಸಿ ಎಂದು ತಾಪಂ ಅಧ್ಯಕ್ಷರು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement