'ರೋಗಗಳ ಬಗ್ಗೆ ಅರಿವು ಮೂಡಿಸಿದ್ದೇ ಆದಲ್ಲಿ ನಿಯಂತ್ರಣ ಸಾಧ್ಯ'
ಕುಣಿಗಲ್: ಸೊಳ್ಳೆಗಳಿಂದ ಹರಡುವಂತ ಮಾರಣಾಂತಿಕ ರೋಗಗಳ ಬಗ್ಗೆ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಎಲ್ಲಾ ವರ್ಗದ ಜನತೆಯಲ್ಲಿ ಸೂಕ್ತ ಅರಿವು ಮೂಡಿಸಿದ್ದೇ ಆದಲ್ಲಿ, ರೋಗಗಳ ನಿಯಂತ್ರಣ ಬಹಳಷ್ಟು ಮಟ್ಟಿಗೆ ಯಶಸ್ವಿಗೊಳ್ಳುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಡಾ.ಬಿ.ಎನ್.ರವಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಆಂಗವಾಗಿ ಏರ್ಪಡಿಸಲಾಗಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನಕ್ಷೇತ್ರದಲ್ಲಿ ವ್ಯಾಪಕವಾಗಿ ಸಂಶೋಧನೆಗಳು ಬೆಳೆದಂತೆ ಮಲೇರಿಯಾ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ಆದರೆ, ಬೇರೆ ತರಹದ, ಸೊಳ್ಳೆಯ ಬಾಧೆಯಿಂದ ಬರುವ ರೋಗಗಳು ಪತ್ತೆಯಾಗುತ್ತಿದ್ದು, ಇವುಗಳ ಸೋಂಕು ಬರುವ ಮುನ್ನವೆ, ಸೊಳ್ಳೆಗಳ ನಿಯಂತ್ರಣದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಮೂಲಕ ಸೊಳ್ಳೆಗಳ ಉತ್ಪಾದನೆಯನ್ನು ನಿಯಂತ್ರಿಸಿ, ರೋಗಗಳು ಬಾರದಂತೆ ತಡೆಯಬಹುದಾಗಿದೆ. ಮಲೇರಿಯಾ, ಡೆಂಘೀ ಸೇರಿದಂತೆ ಯಾವುದೇ ರೋಗಕ್ಕೆ ಬಳಲಿದವರ ಕುಟುಂಬದ ಪಾಡು ನಿಜಕ್ಕೂ ಸಂಕಷ್ಟದಲ್ಲಿರುತ್ತದೆ, ಎಎನ್‌ಎಂಗಳು ಜನತೆಯಲ್ಲಿ ರೋಗ ಮತ್ತು ಅದರ ನಿಯಂತ್ರಣಗಳ ಬಗ್ಗೆ ಸಾಕಷ್ಟು ಅರಿವನ್ನು ಮೂಡಿಸಿ, ಅನುಷ್ಠಾನಗೊಳಿಸುವ ಮೂಲಕ ರೋಗನಿಯಂತ್ರಣದ ದಿಸೆಯಲ್ಲಿ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ ಎಂದರು.