ವಾಟರ್ಗ್ರಿಡ್: ಉಸಿರೆತ್ತದ 11 ಶಾಸಕರು
ತುಮಕೂರು: ಪ್ರತಿ ಜಿಪಂ ತ್ರೈಮಾಸಿಕ ಕೆಡಿಪಿ ಸಭೆ ಹಾಗೂ ಮಾಸಿಕ ಜಿಪಂ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ಚರ್ಚೆಯಾಗುವುದೇ ಕುಡಿಯುವ ನೀರಿನ ಸಮಸ್ಯೆ ಕುರಿತು. ಕುಡಿಯುವ ನೀರಿಗಾಗಿ ಕೂಗಾಡುವ ಜಿಲ್ಲೆಯ 11 ಶಾಸಕರು ಹಾಗೂ 57 ಜಿಲ್ಲಾ ಪಂಚಾಯತ್ ಸದಸ್ಯರು ಒಣ ಚರ್ಚೆಯಲ್ಲೇ ಕಾಲ ಕಳೆಯುತ್ತಿದ್ದಾರೆಯೇ ವಿನಃ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಕುರಿತಂತೆ ತಲೆ ಕೆಡಿಸಿಕೊಂಡಿಲ್ಲ. ತುಮಕೂರು ಸೇರಿದಂತೆ ಬಯಲು ಸೀಮೆಯ 9 ಜಿಲ್ಲೆಗಳ 43 ತಾಲೂಕುಗಳ, ಸುಮಾರು 10 ಸಾವಿರ ಕೆರೆಗಳಿಗೆ ನೀರುಣಿಸುವ ಪರಮಶಿವಯ್ಯ ವರದಿಯಾಧಾರಿತ ವಾಟರ್ಗ್ರಿಡ್ ಕೆನಾಲ್ ಯೋಜನೆ ಕುರಿತು ಈವರೆಗೆ ಜಿಲ್ಲಾ ಪಂಚಾಯತ್ ಕೆಡಿಪಿ ತ್ರೈಮಾಸಿಕ ಸಭೆಯಲ್ಲಾಗಲೀ, ಮಾಸಿಕ ಜಿಲ್ಲಾ ಪಂಚಾಯತ್ ಸಭೆಯಲ್ಲಾಗಲೀ ಯಾವೊಬ್ಬ ಶಾಸಕರೂ, ಜಿಪಂ ಸದಸ್ಯರೂ ಉಸಿರೆತ್ತದಿರುವುದು ದುರಂತದ ಸಂಗತಿ.
ಮಳೆಯಾಶ್ರಿತ ಪ್ರದೇಶಗಳಾಗಿರುವ, ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದ, ನದಿ ಮೂಲಗಳಿಲ್ಲದ ತುಮಕೂರು ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಮಳೆಯೊಂದೇ ಆಧಾರ. ಆದರೆ ಮಳೆಗಾಲದಲ್ಲಿ ಸಾವಿರಾರು ಟಿಎಂಸಿ ನೀರು ಸಮುದ್ರ ಸೇರುವುದರ ಕುರಿತು ಬೆಳಕು ಚೆಲ್ಲುವ, ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಂಡು ಶಾಶ್ವತವಾಗಿ ಕುಡಿಯುವ ನೀರಿನ ಬವಣೆ ನೀಗಿಸಿಕೊಳ್ಳಲು ಪರಿಹಾರ ಒದಗಿಸುವ ಯೋಜನೆಯೆಂದೇ ಪರಿಗಣಿಸಲ್ಪಟ್ಟಿರುವ ಪರಮಶಿವಯ್ಯ ವರದಿಯಾಧಾರಿತ ವಾಟರ್ಗ್ರಿಡ್ ಕೆನಾಲ್ ಯೋಜನೆ ಕುರಿತು ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಯಾವೊಬ್ಬ ಶಾಸಕರೂ ಉಸೆರೆತ್ತದಿರುವುದು ಆಶ್ಚರ್ಯಕರ ಸಂಗತಿ. ಜಿಲ್ಲೆಯ 11 ಶಾಸಕರೂ ಸಹ ಚಕಾರವೆತ್ತದ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದರೆ ತಪ್ಪಾಗಲಾರದು.
ಶಾಸಕರ ಹಾದಿಯಲ್ಲೇ ನಡೆದಿರುವ 57 ಮಂದಿ ಜಿಲ್ಲಾ ಪಂಚಾಯತ್ ಸದಸ್ಯರೂ ಸಹ ವಾಟರ್ ಗ್ರಿಡ್ ಕುರಿತಂತೆ ದಿವ್ಯ ಮೌನ ವಹಿಸಿದ್ದಾರೆ.
ಮಂತ್ರಿಯೂ ಹೊರತಲ್ಲ: ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ತಾವು ಪರಮಶಿವಯ್ಯ ವರದಿಯಾಧಾರಿತ ಕುಡಿಯುವ ನೀರೊದಗಿಸುವ ವಾಟರ್ ಗ್ರಿಡ್ ಯೋಜನೆ ಪರ ಇಲ್ಲ ಎಂಬುದನ್ನು ತಮ್ಮ ಹೇಳಿಕೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವಾಟರ್ಗ್ರಿಡ್ ಯೋಜನೆ ಕುರಿತಂತೆ ಶಾಸಕರು, ಮಂತ್ರಿಗಳು, ಜಿಲ್ಲಾ ಪಂಚಾಯತ್ ಸದಸ್ಯರ ನಡುವೆ ವ್ಯತ್ಯಾಸವೇನಿಲ್ಲ ಎಂಬುದು ಸಾಬೀತಾಗಿದೆ.
ಮ್ಯಾರಥಾನ್ ಮಾದರಿ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಜೂ. 14 ಹಾಗೂ 15 ರಂದು ಸತತ ಎರಡು ದಿನಗಳ ಕಾಲ ಮ್ಯಾರಥಾನ್ ಮಾದರಿಯಲ್ಲಿ ಜಿಲ್ಲಾ ಪಂಚಾಯತ್ ಕೆಡಿಪಿ ತ್ರೈಮಾಸಿಕ ಸಭೆ ನಡೆಯಿತು. 14 ರಂದು ಪೂರ್ವಭಾವಿ ಸಭೆ ಹೆಸರಲ್ಲಿ ನಡೆದರೆ, 15 ರಂದು ಅಧಿಕೃತವಾಗಿಯೇ ನಡೆಯಿತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಜೂ. 15 ರಂದು ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರೂ ಪಾಲ್ಗೊಂಡಿದ್ದರು. ಮೊದಲಿಗೆ ಶುರುವಾಗಿದ್ದೇ ಕುಡಿಯುವ ನೀರಿನ ಸಮಸ್ಯೆ ಕುರಿತು. ಶಾಸಕರು ಬೋರ್ವೆಲ್ ಕೊರೆಸಲಾಗಿದೆ. ಮೋಟಾರ್ ಇಲ್ಲ ಪಂಪ್ ಇಲ್ಲ ಎಂಬುದಕ್ಕಷ್ಟೇ ಸೀಮಿತವಾದರು. ಆದರೆ ಹಾಲಿ ಚರ್ಚೆಯಲ್ಲಿರುವ ವಾಟರ್ಗ್ರಿಡ್ ಕೆನಾಲ್ ಯೋಜನೆ ಕುರಿತಂತೆ ಉಸಿರೆತ್ತಲಿಲ್ಲ.
ನಂತರ ಜೂ. 17 ರಂದು ನಡೆದ ಜಿಪಂ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ 57 ಮಂದಿ ಜಿಲ್ಲಾ ಪಂಚಾಯತ್ ಸದಸ್ಯರ ವರಸೆ ಕೂಡ ಶಾಸಕರ ಮಾದರಿಯದ್ದೇ. ಅದೇ ಕುಡಿಯುವ ನೀರಿನ ಒಣ ಚರ್ಚೆಗೆ ಸೀಮಿತವಾಯಿತೇ ವಿನಃ, ಶಾಶ್ವತ ಕುಡಿಯುವ ನೀರೊದಗಿಸುವ ಪರಮಶಿವಯ್ಯನವರ ವರದಿ, ವಾಟರ್ಗ್ರಿಡ್ ಕೆನಾಲ್ ಯೋಜನೆಯತ್ತ ಸದಸ್ಯರ ಚಿತ್ತ ಹರಿಯಲೇ ಇಲ್ಲ.
ಅದಲಗೆರೆ ನಾಗೇಂದ್ರಕುಮಾರ್