ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಏಕಶಿಲಾ ಬೆಟ್ಟಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಿ

Mainashree
Updated On : 20 Jun 2013, 11:39 am

ಕ.ಪ್ರ.ವಾರ್ತೆ ಮಧುಗಿರಿ ಜೂ.20
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಿ ಪ್ರವಾಸಿಗರಿಗೆ  ಎಲ್ಲ ಮೂಲ ಸೌಕರ್ಯ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರ  ಪ್ರವಾಸಿ ತಾಣವನ್ನಾಗಿ ಘೋಷಿಸಬೇಕು ಎಂದು ಮಧುಗಿರಿ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಂ.ಡಿ.ಶ್ರೀನಿವಾಸ್ ಒತ್ತಾಯಿಸಿದರು.
ಇಲ್ಲಿನ ಮಾಲೀಮರಿಯಪ್ಪ ರಂಗಮಂದಿರದಲ್ಲಿ ರಾಮು ವೇದಿಕೆಯಡಿ 2 ದಿನಗಳ ಕಾಲ ನಡೆಯಲಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಮಾತನಾಡಿದ ಅವರು, ದಶಕಗಳಿಂದಲೂ ಮಧುಗಿರಿಯನ್ನು ಪ್ರವಾಸಿ ತಾಣವಾಗಿ ರೂಪಿಸುವ ವಿಚಾರ ಸರ್ಕಾರಗಳ ಮುಂದಿದ್ದರೂ  ಅದು ಕಾರ್ಯಗತಗೊಂಡಿಲ್ಲ, ಮಧುಗಿರಿ ದುರ್ಗ ಪ್ರಕೃತಿ ಸಹಜ ರಕ್ಷಣೆಯಿಂದ ಕೋಟೆಯ ವಿನ್ಯಾಸ ವೈಭವದಿಂದ ಕೂಡಿದೆ. ಇಲ್ಲಿ ಗಂಗರು,ಪಲ್ಲವರು, ಹೊಯ್ಸಳರು, ನೊಳಂಬರು, ಚೋಳರು, ವಿಜಯ ನಗರದ ಅರಸರು , ಮೈಸೂರು ಒಡೆಯರು ಮರಾಠರು, ಹೈದರ್, ಟಿಪ್ಪು ಇನ್ನು ಅನೇಕ ರಾಜ ಮನೆತನದವರು ಆಳ್ವಿಕೆ ನಡೆಸಿ ಕೋಟೆ ಕೊತ್ತಲು, ಜೈನ ಬಸದಿ, ದೇವಾಲಯಗಳು, ಪಂಚ ಕಲ್ಯಾಣಿ,  ಹೀಗೆ ಹತ್ತು ಹಲವು ಪಳಯುಳಿಕೆಗಳು ಇಂದಿಗೂ ರಾರಾಜಿಸುತ್ತಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಿ ಉಳಿಸಿ ಬೆಳಸುವ ನಿಟ್ಟಿನಲ್ಲಿ ಏಕಶಿಲಾ ನಾಡನ್ನು ಪ್ರವಾಸಿ ತಾಣವಾಗಿ ರೂಪಿಸಿ ಎಲ್ಲ ಸೌಲಭ್ಯ ಒದಗಿಸಬೇಕು ಎಂದರು.
ನೋವಿನ ಸಂಗತಿ: ಕರ್ನಾಟಕ ರಾಜ್ಯ ನಿರಂತರ ಶೋಷಣೆಗೆ ಒಳಪಟ್ಟು ಅನ್ಯ ಭಾಷಿಕರ ಪ್ರಭಾವಕ್ಕೆ ಸಿಕ್ಕಿ ಕೃಷಿ  ಭೂಮಿ ಮಾರಿಕೊಂಡು ಅನ್ಯರ ಜೀತದಾಳುಗಳಾಗಿ ಕೆಲಸ ಮಾಡುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದ ಅವರು, ಕೃಷಿಕರು ಯಾವುದೇ ಕಾರಣಕ್ಕೂ  ಭೂಮಿ ಮಾರಬಾರದು. ಕರ್ನಾಟಕ ಭೂಮಿ ಕಳೆದುಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಕನ್ನಡಿಗರ ಬದುಕು, ಭವಿಷ್ಯ ಅವಸಾನದತ್ತ ಸಾಗಲಿದ್ದು, ನಮ್ಮ ಮಕ್ಕಳನ್ನು ಯಾವ ಭಾಷೆ ಶಾಲೆಗೆ ಕಳಿಸಬೇಕು ಎಂಬ ಚಿಂತೆ ಕಾಡಲಿದೆ. ಅನ್ಯ ಭಾಷಿಗರ ಬಗ್ಗೆ ದ್ವೇಷವಿಲ್ಲ, ಅವರು ನಮ್ಮ ಜತೆ ಬಾಳಲಿ, ಆದರೆ ನಮ್ಮ ಕನ್ನಡ ನಾಡು ಪೂರ್ಣ ಅನ್ಯರ ಪಾಲು ಮಾಡುವುದು ಬೇಡ, ಕನ್ನಡ ಭಾಷೆ, ನೆಲ, ಜಲ, ನಾಡಿನ ಬಗ್ಗೆ ಜನರು ಎಚ್ಚರಗೊಂಡು ಉಳಿಸಿ ಬೆಳಸಬೇಕು.ಇಲ್ಲದಿದ್ದರೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಖಚಿತ, ಆಂಧ್ರ ಪ್ರದೇಶ ಅಸ್ಥಿತ್ವಕ್ಕೆ ಬಂದಾಗ ಅಚ್ಚ ಕನ್ನಡ ಪ್ರದೇಶಗಳಾದ ಆಲೂರು, ಆವದಾನಿ, ರಾಯದುರ್ಗ ಮತ್ತು ಮಡಕಶಿರಾ ಕರ್ನಾಟಕ ಕೈ ಬಿಟ್ಟವು. ಕಾಸರಗೋಡು ಕೇರಳಕ್ಕೆ ಸೇರಿತು. ಉದಕಮಂಡಲ ತಮಿಳುನಾಡಿಗೆ ಹೋಯಿತು.ಈಗ ಬೆಂಗಳೂರು ಏನಾಗಿದೆ ಎಂದು ಪ್ರಶ್ನಿಸಿ, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮ  ಉಳಿಸಲು ಸಾಮೂಹಿಕ ಪ್ರಯತ್ನ ಬೇಕು ಎಂದರು.  ಇದಕ್ಕೂ ಮೊದಲು ದಂಡೂರು ಬಾಗಿಲಿನಿಂದ ಸಮ್ಮೇಳನಾಧ್ಯಕ್ಷ ಎಂ.ಡಿ.ಶ್ರೀನಿವಾಸ್ ಅವರನ್ನು  ಸಿರಿಗೆಜ್ಜೆ ಕಲಾ ತಂಡದೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement