ಕೊಬ್ಬರಿಗೆ ಒಂದೆರಡು ದಿನದಲ್ಲಿ ಚೆಕ್
ತಿಪಟೂರು: ಕಲ್ಪತರು ನಾಡು ತಿಪಟೂರಿನಲ್ಲಿ ಕೊಬ್ಬರಿ ಬೆಲೆ ತೀವ್ರ ಕುಸಿತವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಬೆಂಬಲ ಬೆಲೆಗೆ ಕೊಬ್ಬರಿ ಕೊಳ್ಳುವ ನ್ಯಾಫೆಡ್ ಖರೀದಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಉದ್ಘಾಟನೆ ಮಾಡುವ ಮೂಲಕ ಅಧಿಕೃತ ಚಾಲನೆ ನೀಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಇಂದು ಏರ್ಪಡಿಸಿದ್ದ ಕೊಬ್ಬರಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಕೇವಲ 4500ಕ್ಕೆ ಮಾರಾಟವಾಗುತ್ತಿದ್ದು ಇದರಿಂದ ಬೆಳೆಗಾರರಿಗೆ ಹೆಚ್ಚಿನ ನಷ್ಟವಾಗುತ್ತಿದ್ದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೆ ಬೆಂಬಲ ಬೆಲೆ ರು.5550 ಮತ್ತು 1 ಸಾವಿರ ರು. ಪ್ರೋತ್ಸಾಹ ದನ ಸೇರಿ ಇದೀಗ ರು. 6550ಕ್ಕೆ ಖರೀದಿ ಆರಂಭಿಸಿದೆ. ಕೊಬ್ಬರಿ ಬೆಳೆಗಾರರ ಮುಖದಲ್ಲಿದ್ದ ಆತಂಕ ಮಾಯವಾಗಿದೆ. ಇದೇ ಮೊದಲ ಬಾರಿಗೆ ರೈತರಿಂದ ಖರೀದಿಸಿದ ಕೊಬ್ಬರಿಗೆ ಒಂದೆರಡು ದಿನಗಳಲ್ಲಿ ಚೆಕ್ ನೀಡುವ ವ್ಯವಸ್ಥೆ ಮಾಡಿದ್ದು ಖರೀದಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ನೀರಾವರಿ ಬಗ್ಗೆ ಮಾತನಾಡಿದ ಅವರು ಪರಮಶಿವಯ್ಯ ಯೋಜನೆ ಅನುಕೂಲಕರವಾಗಿರುವುದರಿಂದ ಸರ್ಕಾರದ ಮಟ್ಟದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಜಾರಿಗೆ ತರುತ್ತೇವೆಂದು ತಿಳಿಸಿದರು.
ಕೂಡಲೇ ಜಾರಿಗೆ ತನ್ನಿ: ಸಂಸದ ಜಿ.ಎಸ್. ಬಸವರಾಜು ಮಾತನಾಡಿ ಅಡುಗೆ ಎಣ್ಣೆ ವಿದೇಶಗಳಿಂದ ಹೆಚ್ಚು ಆಮದಾಗುತ್ತಿದೆ. ಆದರೆ ನಾವೇ ಬೆಳೆಯುವ ಕೊಬ್ಬರಿ ಎಣ್ಣೆ ಅಡುಗೆಗೆ ಅತ್ಯುತ್ತಮವಾಗಿದ್ದು ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಿ ಕೊಬ್ಬರಿ ಎಣ್ಣೆಯನ್ನು ನಾವೇ ಬಳಸುವಂತಾದರೆ ಕೊಬ್ಬರಿಗೆ ಹೆಚ್ಚಿನ ಬೆಲೆ ಸಿಗುವ ಮೂಲಕ ಬೆಳೆಗಾರರು ಆರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದರು. ಜಿಲ್ಲೆಯಾದ್ಯಂತ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದ್ದು ಪರಮಶಿವಯ್ಯ ಯೋಜನೆ ಅನುಷ್ಠಾನದಿಂದ ನೀರಿನ ಬವಣೆ ತಪ್ಪಿಸಬಹುದಾಗಿದ್ದು ಸರ್ಕಾರ ಕೂಡಲೆ ಜಾರಿಗೆ ತಂದು ಕೆಲಸ ಪ್ರಾರಂಬಿಸಬೇಕೆಂದು ಒತ್ತಾಯಿಸಿದರು.
ಶಾಸಕ ಷಡಕ್ಷರಿ ಮಾತನಾಡಿ ತೆಂಗು ಬೆಳೆಗಾರರ ಸಂಕಷ್ಟವನ್ನು ಅರಿತು ಸರ್ಕಾರದ ಮಟ್ಟದಲ್ಲಿ ನಫೆಡ್ ಮೂಲಕ ಕೊಬ್ಬರಿ ಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪ್ರೋತ್ಸಾಹದನವನ್ನು 10 ಕ್ವಿಂಟಾಲ್ನಿಂದ 20 ಕ್ವಿಂಟಾಲ್ಗೆ ಹೆಚ್ಚಿಸಲು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲಾಗಿದ್ದು ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದರು. ರೈತರು ಮತ್ತು ವರ್ತಕರು ಒಂದೇ ಬಂಡಿಯ 2 ಚಕ್ರಗಳಿದ್ದಂತೆ. ಆದ್ದರಿಂದ ರೈತರ ಬಗ್ಗೆ ವರ್ತಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು.