ತವರು ಕ್ಷೇತ್ರವನ್ನು ಎಂದಿಗೂ ಕಡೆಗಣಿಸಲ್ಲ: ಸಚಿವ ಟಿಬಿಜೆ
ಕ.ಪ್ರ.ವಾರ್ತೆ ಹುಳಿಯಾರು ಜೂ. 20
ನನಗೆ ಮೊದಲ ಬಾರಿ ಗೆಲವು ತಂದು ಕೊಟ್ಟ ಕಳ್ಳಂಬೆಳ್ಳ ಕ್ಷೇತ್ರ ಹಾಗೂ ಕ್ಷೇತ್ರದ ಹೋಬಳಿಗಳಲ್ಲಿ ಪ್ರಮುಖವಾದ ಹುಳಿಯಾರು ಹೋಬಳಿ ನನ್ನ ತವರಿದ್ದಂತೆ, ಇಲ್ಲಿಯ ಜನ ನನ್ನನ್ನು ಮೊದಲ ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದರು. ನಂತರ ನನ್ನನ್ನು ಕೃಷಿ ಸಚಿವರನ್ನಾಗಿ ಮಾಡಲಾಯಿತು. ಅದರಂತೆ ಈ ಬಾರಿ ಕಾನೂನು ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡುವಲ್ಲಿ ನನ್ನ ತವರು ಕ್ಷೇತ್ರದಂತಿರುವ ಹುಳಿಯಾರನ್ನು ಎಂದಿಗೂ ಮರೆಯುವುದಿಲ್ಲ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂದು ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಫೆಡ್ ಕೇಂದ್ರದ ಉದ್ಘಾಟನೆ ನೆರವೇರಿಸಿ ಶಿರಾಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹುಳಿಯಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಿ ಹೋಬಳಿಯ ಸಮಸ್ಯೆಗಳನ್ನು ಆಲಿಸಿದರು.
ನಫೆಡ್ ಕೇಂದ್ರ ಪ್ರಾರಂಭವಾಗುತ್ತಿದಂತೆ ಅನೇಕ ಕಡೆ ಕೊಬ್ಬರಿ ಬೆಲೆ ದಿಢೀರನೇ ಏರಿಕೆಯಾಗಿದೆ. ಇದು ನಫೆಡ್ ಕೇಂದ್ರಗಳಿಗೆ ರೈತರು ಕೊಬ್ಬರಿಯನ್ನು ಮಾರದಂತೆ ತಡೆಯುವ ತಂತ್ರವಾಗಿದೆ. ಇಂತಹ ಯಾವುದಕ್ಕೂ ರೈತರು ಮಣಿಯದೇ ಸರ್ಕಾರ ಸ್ಥಾಪಿಸಿರುವ ನಫೆಡ್ ಕೇಂದ್ರಗಳಿಗೆ ತಮ್ಮ ಕೊಬ್ಬರಿಯನ್ನು ಮಾರಿ ಹಾಗೂ ಮೂರರಿಂದ ನಾಲ್ಕು ದಿನಗಳಲ್ಲಿ ನಿಮಗೆ ನಿಮ್ಮ ಹಣ ಕೈಸೇರಲಿದೆ ಎಂದರು. ನಾನು ಈ ಭಾಗದವನೆ ಆಗಿದ್ದು ಇಲ್ಲಿನ ವರ್ತಕರು ಮತ್ತು ಅಧಿಕಾರಿಗಳು ಯಾವ ರೀತಿ ಆಟಗಳನ್ನು ಆಡುತ್ತಾರೆಂಬುದನ್ನು ಬಲ್ಲವನಾಗಿದ್ದು, ಈ ಸಂದರ್ಭದಲ್ಲಿ ಯಾರು ತಮ್ಮ ಗೋದಾಮುಗಳಲ್ಲಿ ಹೆಚ್ಚಿನ ಕೊಬ್ಬರಿ ಶೇಖರಣೆ ಮಾಡಿರುತ್ತಾರೆಂಬುದನ್ನು ನನಗೆ ತಿಳಿಸಿ. ಅವರ ಗೋಡೌನ್ಗಳನ್ನು ಸೀಸ್ ಮಾಡಿಸುವುದಾಗಿ ಹಾಗೂ ವರ್ತಕರ ಜೊತೆ ಮಾರುಕಟ್ಟೆ ಅಧಿಕಾರಿಗಳು ಕೈಜೋಡಿಸಿದರೆ ಅವರ ವಿರುದ್ಧವೂ ಉಗ್ರಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಾಯಂ ವೈದ್ಯರಿಗಾಗಿ ಆಗ್ರಹ: ಹುಳಿಯಾರು ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದೆ ರೋಗಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದಾಗ ಸಚಿವರು ಕೂಡಲೇ ಮೊಬೈಲ್ ಮೂಲಕ ಡಿಹೆಚ್ಓ ಅವರೊಂದಿಗೆ ಮಾತನಾಡಿ ಇನ್ನು ಕೆಲ ದಿನಗಳಲ್ಲಿ ಕಾಯಂ ವೈದ್ಯರನ್ನು ನೇಮಿಸುವಂತೆ ತಿಳಿಸಿದರು.
ಅಲ್ಲದೆ ಈ ಭಾಗದಲ್ಲಿ ಶುದ್ದ ಕುಡಿಯುವ ನೀರಿಲ್ಲ ಎಂಬುದು ತಮಗೆ ತಿಳಿದಿದ್ದು, ಬೋರನಕಣಿವೆಯಿಂದ ಹುಳಿಯಾರಿಗೆ ನಿತ್ಯ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವ ಶುದ್ಧೀಕರಣ ಘಟಕವನ್ನು ಗ್ರಾಮ ಪಂಚಾಯ್ತಿಯಿಂದ ಬೇರ್ಪಡಿಸಿ ಜಿಲ್ಲಾ ಎಂಜಿನಿಯರ್ ಅವರ ಅಧೀನಕ್ಕೆ ನೀಡಿ, ಸದಾಕಾಲ ಸ್ವಚ್ಛವಾಗಿಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಆಶೋಕ್ ಬಾಬು, ಧನುಷ್ ರಂಗನಾಥ್, ಜಬೀಉಲ್ಲಾ, ಮೀಸೆ ರಂಗಪ್ಪ, ಎಪಿಎಂಸಿ ಉಪಾಧ್ಯಕ್ಷ ಸಿದ್ರಾಮಯ್ಯ, ಯಳನಡು ಮಲ್ಲಿಕಣ್ನ, ಹೊಸಳ್ಳಿ ಅಶೋಕ್, ಕೆಂಕೆರೆ ಶಿವಕುಮಾರ್, ಬಡಗಿ ರಾಮಣ್ಣ, ವೆಂಕಟೇಶ್, ಚಿಕ್ಕಬಿದರೆ ಶಾಂತಣ್ಣ, ಚುರುಮುರಿ ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.