ಮಹಾಮಳೆಗೆ ಸಿಲುಕಿ ಕುಣಿಗಲ್ನ ಮೂರು ಕುಟುಂಬದ ಪರದಾಟ
ಕುಣಿಗಲ್: ಉತ್ತರಖಾಂಡ ರಾಜ್ಯದಲ್ಲಿನ ಮಹಾಮಳೆಗೆ ಪಟ್ಟಣದ ಮೂರು ಕುಟುಂಬದವರು ಸಿಲುಕಿ ಪರದಾಡುವಂತಾಗಿ, ಊರಿಗೆ ಮರಳಲು ಪರದಾಡುತ್ತಿದ್ದಾರೆ.
ಎಪಿಎಂಸಿ ಸದಸ್ಯ ಸಂತೋಶ್ ತಮ್ಮ ಕುಟುಂಬ ವರ್ಗ ಬಂಧುಗಳೊಡನೆ ಕಳೆದ ವಾರ ನವದೆಹಲಿಗೆ ತೆರಳಿ ಅಲ್ಲಿಂದ ಮಿನಿಬಸ್ನಲ್ಲಿ ಕಾಶಿಯತ್ತ ಪ್ರಯಾಣ ಬೆಳೆಸಿದ್ದು ಶನಿವಾರದ ಮಹಾಮಳೆಗೆ ಕಾಶಿ ಮಾರ್ಗಮಧ್ಯ ಮಾರ್ಕಾಟ್ ಎಂಬ ಗುಡ್ಡದ ಮೇಲಿನ ಗ್ರಾಮದಲ್ಲಿ ಕಳೆದ ಐದು ದಿನಗಳಿಂದಲೂ ತಂಗಿದ್ದಾರೆ. ಬೆಸ್ಕಾಂ ಉದ್ಯೋಗಿ ರಾಮಚಂದ್ರಶೆಟ್ಟಿ ಎಂಬುವವರ ಪತ್ನಿ ಲೀಲಾವತಿ ಸಹೋದರ ಸಂಬಂಧಿಗಳೊಂದಿಗೆ ಕಾಶಿಯಾತ್ರೆಗೆ
ತೆರಳಿದ್ದು, ಶನಿವಾರದಿಂದ ಮಹಾಮಳೆಗೆ ಸಿಲುಕಿ ಹೃಷಿಕೇಶ್ ಸಮೀಪದ ಉತ್ತರಕಾಶಿಯ ಶಿವಾನಂದ ಆಶ್ರಮದಲ್ಲಿ ತಂಗಿದ್ದರೆ. ಇನ್ನು ಜಾನ್ಸನ್ ಕಾರ್ಖಾನೆಯ ಉದ್ಯೋಗಿ ವಿನಯ್ ಉಪಾಧ್ಯಾಯ ಪತ್ನಿ, ಪುತ್ರನೊಂದಿಗೆ ತೆರಳಿದ್ದು ಇವರೂ ಸಹ ಉತ್ತರಕಾಶಿಯ ಸಮೀಪದಲ್ಲಿ ಮಹಾಮಳೆಗೆ ಸಿಲುಕಿ ಶಿವಾನಂದ ಆಶ್ರಮದಲ್ಲಿ ತಂಗಿದ್ದಾರೆ. ಎಲ್ಲರೂ ಪಟ್ಟಣದಲ್ಲಿನ ಇತರೆ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು, ಮಹಾಮಳೆಯ ರಭಸ ಕಡಿಮೆಯಾದರೂ ಅದು ಸೃಷ್ಟಿಸಿದ ಅವಾಂತರದಿಂದ ರಸ್ತೆ ಸಂಪರ್ಕ ಕಡಿದುಹೋಗಿದ್ದು ಮುಂದಕ್ಕೂ ಹೋಗದೆ, ಹಿಂದಕ್ಕೂ ಬಾರದ ಅತಂತ್ರ ಸ್ಥಿತಿಯಲ್ಲಿ ಕಾಲಕಳೆಯುತ್ತಿದ್ದಾರೆ. ದಿನವೊಂದಕ್ಕೆ ಒಂದು ಕಿಮಿ ಸಾಗುವುದು ದುಸ್ತರವಾಗಿದೆ ಎಂದು ಅವರು ಹೇಳಿದ್ದು, ಸರ್ಕಾರ ನೇಮಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದರೆ, ರಾಜ್ಯದ ಯಾತ್ರಿಗಳ ಆರೋಗ್ಯ, ಊಟ, ತಿಂಡಿ ಬಗ್ಗೆ ವಿಚಾರಿಸಿಕೊಳ್ಳುತ್ತಾರೆ ಹೊರತು, ಕರ್ನಾಟಕಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಬಗ್ಗೆ ಯಾವುದೇ ಉತ್ತರ ನೀಡುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಊರಿಗೆ ಬಂದರೆ ಸಾಕಪ್ಪ ಎನ್ನುವ ತವಕದಲ್ಲಿದ್ದಾರೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.