ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 20 Jun 2013, 11:42 am

23ರಂದು ವೀರಶೈವ ವಧೂ-ವರರ ಸಮಾವೇಶ
ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿಯ ಮಹಿಳಾ ವಿಭಾಗ ಮೈತ್ರಿ  ಸಂಘದ ರಜತ ಮಹೋತ್ಸವದ ಅಂಗವಾಗಿ  ವಧೂ, ವರರ ಸಮಾವೇಶವನ್ನು ಜೂ.23ರಂದು ಆಯೋಜಿಸಲಾಗಿದೆ ಎಂದು ಮೈತ್ರಿ ಸಂಘದ ಅಧ್ಯಕ್ಷೆ ಮೀನಾ ತಿಳಿಸಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ವಧೂ-ವರರು ಪರಸ್ಪರ ಒಪ್ಪಿ ವಿವಾಹವಾಗಲು ವೇದಿಕೆ ಕಲ್ಪಿಸಲಾಗಿದೆ. ವಿಧವಾ ವಿವಾಹಕ್ಕೆ ಅವಕಾಶವಿದ್ದು ಆಸಕ್ತರು ಇದನ್ನು ಬಳಸಿಕೊಳ್ಳಬಹುದು ಎಂದರು. ಜೂ.23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಜೆ.ಸಿ.ರಸ್ತೆಯಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶವನ್ನು ಮೈತ್ರಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಶಶಿಕಲಾ ಉದ್ಘಾಟಿಸುವರು. ಅತಿಥಿಗಳಾಗಿ ಉದ್ಯಮಿ ಬಿ.ಎಸ್.ಬಾಳಯ್ಯ ಉಪಸ್ಥಿತರರಲಿದ್ದಾರೆ ಎಂದು ಮಾಹಿತಿ ನೀಡಿದರು. ಸಮಾವೇಶದಲ್ಲಿ ಭಾಗವಹಿಸಲು ಬಯಸುವವರು ಜೂ.23ರ ಬೆಳಗ್ಗೆ ನಿಗದಿತ ಶುಲ್ಕ ನೀಡಿ ನೋಂದಾವಣೆ ಮಾಡಿಸಬೇಕು. ಈಗಾಗಲೇ ನೋಂದಣಿಯಾಗಿರುವ ವಧೂ-ವರರು ಮತ್ತೆ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.9480250309 ಸಂಪರ್ಕಿಸಿ ಎಂದು ಕಲ್ಯಾಣ ಕೇಂದ್ರದ ಅಧ್ಯಕ್ಷೆ ಎಸ್.ಸುಧಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮೈತ್ರಿ ಸಂಘದ ಕಾರ್ಯದರ್ಶಿ ಜಯಂತಿ, ಉಪಾಧ್ಯಕ್ಷೆ ಪ್ರಭಾಮಣಿ, ಕಲ್ಯಾಣ ಕೇಂದ್ರದ ಉಪಾಧ್ಯಕ್ಷೆ ದೇವರಾಜಮ್ಮ, ವೀಣಾ, ರಮಾದೇವಿ, ವಿಜಯಮ್ಮ ಮುಂತಾದವರು ಹಾಜರಿದ್ದರು.
ಮಧ್ಯಮ ವರ್ಗದವರು ಬದುಕ ಬೇಡ್ವೇನ್ರೀ: ಕೃಷ್ಣಪ್ಪ ಕಿಡಿ

ತುರುವೇಕೆರೆ: ಈ ಸರ್ಕಾರದಲ್ಲಿ ಮಧ್ಯಮ ವರ್ಗದವರು ಬದುಕ ಬೇಡ್ವೇನ್ರಿ. ರಾಜ್ಯದಲ್ಲಿ ಕೋಟ್ಯಂತರ ಮಂದಿ ಮಧ್ಯಮ ವರ್ಗದವರು ಇದ್ದಾರೆ. ಅವರಿಗೆ ತಿನ್ನಲು ಅಕ್ಕಿ ಬೇಡ್ವ. ಅವರು ಮನುಷ್ಯರಲ್ವ. ಬಡವರಿಗೆ 1 ರು.ನಲ್ಲಿ ಅಕ್ಕಿ ನೀಡೋ ಸರ್ಕಾರ ಮಧ್ಯಮ ವರ್ಗದ ಜನರಿಗೆ ಈ ಹಿಂದೆ ನಿರ್ಧರಿಸಿದ ದರದಲ್ಲೇ ಅಕ್ಕಿ ನೀಡಲಿ. ಸರ್ಕಾರ ಈ ಕೂಡ್ಲೇ ಜನವಿರೋಧಿ ನಿಲುವು ಹಿಂತೆಗೆದುಕೊಂಡು ಮಧ್ಯಮ ವರ್ಗದವರಿಗೂ ಅಕ್ಕಿ ಕೊಡದೇ  ಹೋದಲ್ಲಿ ತಾವಂತೂ ಪ್ರತಿಭಟನೆ ಮಾಡುವುದು ಗ್ಯಾರಂಟಿ.   ಹೀಗೆ ಮಧ್ಯಮ ವರ್ಗದ ಜನರಿಗೆ ಆಗಿರೋ ಅನ್ಯಾಯದ ವಿರುದ್ಧ ಕಿಡಿ ಕಾರಿದವರು ಶಾಸಕ ಎಂ.ಟಿ.ಕೃಷ್ಣಪ್ಪ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಪ್ರಚಾರದ ಭರಾಟೆಗೆ ಜೋತು ಬಿದ್ದು ಈಗ 1 ರು.ಗೆ ಅಕ್ಕಿ ಅಂತ ಘೋಷಿಸಿದೆ. ಆದರೆ ಮಧ್ಯಮ ವರ್ಗದವರು ಕಾಂಗ್ರೆಸ್ಸಿಗರ ಕಣ್ಣಿಗೆ ಬೀಳಲಿಲ್ಲವೇ. ಬಡವರಿಗೆ ಸರ್ಕಾರವೇನೋ ರಿಯಾಯಿತಿ ದರದಲ್ಲಿ ಅಕ್ಕಿ ಕೊಡುತ್ತೆ. ಶ್ರೀಮಂತರು ಅಕ್ಕಿ ಬೆಲೆ ಎಷ್ಟಾದರೂ ಪರವಾಗಿಲ್ಲ ಹಣ ಕೊಟ್ಟು ತಿಂತಾರೆ. ಆದರೆ ಮಧ್ಯಮ ವರ್ಗದವರ ಸ್ಥಿತಿ ತಿಳಿಯದ ಈ ಕಾಂಗ್ರೆಸ್ ಸರ್ಕಾರ ಮಧ್ಯಮವರ್ಗದವರ ಪಾಲಿಗೆ ಶತ್ರುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಜನಸಾಮಾನ್ಯರ ಪರ ಎಂದು ಕೊಂಡಿದ್ದೆವು. ಆದರೆ ಮಧ್ಯಮ ವರ್ಗದವರನ್ನು ಕಡೆಗಣಿಸಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯನವರು ಸಹ ಬಡಜನರ ವಿರೋಧಿ ಎಂಬುದು ಸಾಬೀತಾಗುತ್ತದೆ ಎಂದು ಶಾಸಕ ಕೃಷ್ಣಪ್ಪ ಹೇಳಿದರು.  ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿರುವ ಕಾಂಗ್ರೆಸ್ ನಾಯಕರು ಬಡಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರು. ಆದರೆ ಮಧ್ಯಮ ವರ್ಗದವರನ್ನು ಮರೆತರು. ಮುಂಬರುವ ಚುನಾವಣೆಯಲ್ಲಿ ಮಧ್ಯಮ ವರ್ಗದ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಗುಡುಗಿದರು.


ಕಾಮಗಾರಿಯಲ್ಲಿ ಲೋಪ: ಸಿಎಂರಿಂದ ಲೋಕಾಯುಕ್ತದವರೆಗೆ ದೂರು: ಕೃಷ್ಣಪ್ಪ


ತುರುವೇಕೆರೆ: ಗುಬ್ಬಿಯಿಂದ ಸಿಎಸ್‌ಪುರ - ಶೆಟ್ಟಿಗೊಂಡನಹಳ್ಳಿ- ಎಡಿಯೂರು - ಮಂಡ್ಯ ಮಾರ್ಗದ ರಾಜ್ಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಭಾರಿ ಭ್ರಷ್ಟಾಚಾರದಿಂದ ಕೂಡಿದ್ದು ಕೂಡಲೇ ಕಾಮಗಾರಿಯನ್ನು ತಡೆಹಿಡಿದು ಸಂಪೂರ್ಣ ತನಿಖೆ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಲೋಕಾಯುಕ್ತರಿಗೆ ದೂರು  ನೀಡುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸುಮಾರು 230 ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಎಂಜಿನಿಯರ್‌ಗಳ ಹಾಗೂ ಗುತ್ತಿಗೆದಾರರ ಒಳ ಒಪ್ಪಂದದಿಂದಾಗಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಬಳಸಿಲ್ಲ. ರಸ್ತೆ ನಿರ್ಮಾಣಕ್ಕೆ ಜೇಡಿಮಣ್ಣು ಬಳಿಸಿರುವುದೂ ಸಹ ಕಂಡುಬಂದಿದೆ. ರಸ್ತೆ ನಿರ್ಮಾಣಕ್ಕೆ ಅಗುತ್ತಿರುವ ಆಜು ಬಾಜು ಬಿಡುವ ಸಂಬಂಧ ಕಟ್ಟಡ, ದೇವಾಲಯ ಹಾಗೂ ಶಾಲಾ ಕಟ್ಟಡಗಳ ತೆರೆವಿಗೆ ಸಂಬಂಧಿಸಿದಂತೆಯೂ ಯಾವುದೇ ಸೂಕ್ತ ವಿಧಾನ ಅನುಸರಿಸದೇ ಕರ್ತವ್ಯ ಲೋಪ ಎಸಗಲಾಗಿದೆ ಎಂದು ದೂರಿದ್ದಾರೆ. ಕಾಮಗಾರಿ ಆಗದಿದ್ದರೂ ಸಹ ಹಣ ಬಿಡುಗಡೆ ಮಾಡಲಾಗಿದೆ ಎಂದು ದೂರಿದರು. ಕೂಡಲೇ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಈಗಾಗಲೇ ಮಾಡಲಾಗಿರುವ ಕಾಮಗಾರಿಯನ್ನು ತನಿಖೆ ಮಾಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಖುದ್ದಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ದೂರು ಸಲ್ಲಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಈ ಕುರಿತು ಲೋಕಾಯುಕ್ತರಿಗೂ ದೂರು ಸಲ್ಲಿಸುವುದಾಗಿ ಕೃಷ್ಣಪ್ಪ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement