ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಋತುಮತಿಯಾಗದವರಿಗೆ ಸವಲತ್ತು ಕಲ್ಪಿಸಲು ಮನವಿ

Mainashree
Updated On : 21 Jun 2013, 11:43 am

ಹುಳಿಯಾರು: ರಾಜ್ಯ ಸರ್ಕಾರ ಹಿಂದುಳಿದವರ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಾಗೂ ವಯೋವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ನೆರವಾಗುವಂತೆ ಪಿಂಚಣಿ ಸೇರಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರ ಯಶೋಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ಋತುಮತಿಯಾಗದ ಹೆಣ್ಣು ಮಕ್ಕಳಿಗೆ ಯಾವುದೇ ಸೌಲಭ್ಯವನ್ನು ನೀಡದೆ ಅವರನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ಜಯಕರ್ನಾಟಕ ಸಂಘಟನೆಯವರು ಋತುಮತಿಯಾಗದ ಹೆಣ್ಣುಮಕ್ಕಳಿಗೂ ಪಿಂಚಣಿ ವ್ಯವಸ್ಥೆ ಜಾರಿ ಮಾಡುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧವಾಗಿ ಸಂಘಟನೆಯವರು ಮುಖ್ಯಮಂತ್ರಿ ಹಾಗೂ ಮಕ್ಕಳ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಪತ್ರವನ್ನು ಹುಳಿಯಾರಿನ ನಾಡಕಚೇರಿ ಅಧಿಕಾರಿಗಳ ಮೂಲಕ ಸಲ್ಲಿಸಿದರು.
ಹಿಂದೂ ಸಮಾಜದಲ್ಲಿ ಸ್ತ್ರೀಗೆ ಪೂಜನೀಯ ಸ್ಥಾನವಿದ್ದು, ನಮ್ಮ ಸರ್ಕಾರ ಸ್ತ್ರೀಯನ್ನು ಗೌರವಿಸಿ, ಅವರಿಗೆ ತನ್ನದೇ ಆದ ಒಂದು ಸ್ಥಾನವನ್ನು ನೀಡಿ, ಅನೇಕ ಸವಲತ್ತುಗಳನ್ನು ಕಲ್ಪಿಸಿಕೊಟ್ಟಿದೆ. ಮಗಳು ದೊಡ್ಡವಳಾದರೆ ಮನೆಯವರು ಹಬ್ಬದಂತೆ ಆಚರಿಸುವ ಸಂಭ್ರಮವಿರುತ್ತದೆ. ಆದರೆ ಋತುಮತಿಯಾಗದೆ ಇದ್ದಾಗ ಮನೆಮಂದಿಗೆ ಅವರನ್ನು ಕಾಣುವ ರೀತಿ ಬೇರೆಯಾಗಿರುತ್ತದೆ.
ಇಂತಹ ಸಮಸ್ಯೆ ಎದುರಿಸುತ್ತಿರುವ ಋತುಮತಿಯಾಗದ ಹೆಣ್ಣುಮಕ್ಕಳ ಬಗ್ಗೆ ಸರ್ಕಾರ ಕಾಳಜಿವಹಿಸಿ ಅವರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪಾಸ್ ವ್ಯವಸ್ಥೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ವೆಚ್ಚ ಭರಿಸುವಿಕೆ, ಉನ್ನತ ಶಿಕ್ಷಣ ಮಾಡಿದವರಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ, ಪ್ರತಿ ತಿಂಗಳು ಕನಿಷ್ಠ ಮೂರು ಸಾವಿರ ರು. ಮಾಸಾಶನ ನೀಡುವಂತೆ ಮನವಿ ಪತ್ರವನ್ನು ಕಂದಾಯ ಇಲಾಖೆಯ ಅಧಿಕಾರಿ ಭುವನೇಶ್ವರಿ ಅವರಿಗೆ ಸಲ್ಲಿಸಿದರು.  
ತಾಲೂಕು ಘಟಕದ ಅಧ್ಯಕ್ಷ ಹೆಚ್.ಎನ್.ವೆಂಕಟೇಶ್, ಉಪಾಧ್ಯಕ್ಷ ಜೆಸಿಬಿ ಚಂದ್ರು, ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್ ರೈ,ನಮಹಿಳಾ ಘಟಕದ ಅಧ್ಯಕ್ಷೆ ಪಂಕಜಾಕ್ಷಮ್ಮ,ಸದಸ್ಯರಾದ ದೇವರಾಜಮ್ಮ, ಅಕ್ಕುರ್ ಉನ್ನಿಸಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement