ಚಾಲಕನಿಗೆ ಡಿಪೋ ವ್ಯವಸ್ಥಾಪಕರಿಂದ ಥಳಿತ ವದಂತಿ
ಕುಣಿಗಲ್: ಕುಣಿಗಲ್ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು, ಶುಕ್ರವಾರ ಮಧ್ಯಾಹ್ನ ತಮ್ಮ ವಿರುದ್ಧ ದೂರು ನೀಡಿದ್ದ ಚಾಲಕ ಕಂ ನಿರ್ವಾಹಕನಿಗೆ, ದೂರು ಹಿಂಪಡೆಯುವಂತೆ ಆಗ್ರಹಿಸಿ ಥಳಿಸಿದ್ದಾರೆಂಬ ವದಂತಿ ಸಾರಿಗೆ ಸಂಸ್ಥೆಯ ಡಿಪೋ ಮತ್ತು ಬಸ್ ನಿಲ್ದಾಣದಲ್ಲಿ ಹರಡಿ, ಕೆಲಕಾಲ ಸಿಬ್ಬಂದಿ ಗೊಂದಲಕ್ಕೀಡಾದ ಘಟನೆ ನಡೆದಿದೆ. ಕಳೆದ ಬುಧವಾರದಂದು ತಮ್ಮ ಕಚೇರಿಯಲ್ಲಿ ಕುಣಿಗಲ್ ಡಿಪೋ ಮೇನೆಜರ್, ಚಾಲಕ ಕಂ ನಿರ್ವಾಹಕರೊಬ್ಬರಿಂದ ರಜೆ ಮಂಜೂರು ಮಾಡಲು ಲಂಚ ಪಡೆಯುವಾಗಲೆ ಇಲಾಖೆಯ ಜಾಗೃತ ದಳದ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದರು. ಸದರಿ ಡಿಪೋ ಮೇನೆಜರ್ರವರನ್ನು ಪುನಃ ನಿಯೋಜಿಸದಂತೆ ಸಿಬ್ಬಂದಿ, ಕನ್ನಡಪರ ಸಂಘಟನೆ ಪ್ರಮುಖರು ಆಗ್ರಹಿಸಿದ್ದರು. ಶುಕ್ರವಾರ ಡಿಪೋ ಮೇನೆಜರ್, ತಮ್ಮ ವಿರುದ್ದ ದೂರು ನೀಡಿದ್ದ ಚಾಲಕ ಕಂ ನಿರ್ವಾಹಕನನ್ನು ಕರೆಸಿ, ದೂರು ಹಿಂಪಡೆಯುವಂತೆ ಹಲ್ಲೆಗೆ ಮುಂದಾದರೆಂಬ ವದಂತಿ ಹರಡಿತು. ಈ ಹಿನ್ನೆಲೆಯಲ್ಲಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಸಿಬ್ಬಂದಿ, ಘಟಕದ ಮುಖ್ಯದ್ವಾರಕ್ಕೆ ಬಂದು ಜಮಾವಣೆಗೊಂಡು, ಚರ್ಚೆಗೆ ಮುಂದಾದರೆನ್ನಲಾಗಿದೆ. ಜೆಡಿಎಸ್ ಮುಖಂಡ ಗುರು, ತುಮಕೂರು ವಿಭಾಗದ, ಸಾರಿಗೆ ಸಂಸ್ಥೆ ಅಧಿಕಾರಿಗಳು, ಡಿಪೋ ಮೇನೆಜರ್ರವರ ಕಾರ್ಯವೈಖರಿಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಿ, ಅವರನ್ನು ನಿಯೋಜಿಸದಂತೆ ಮನವಿ ಮಾಡಿದ್ದರೂ, ನಿಯೋಜಿಸಿರುವುದು ಸ್ಥಳೀಯವಾಗಿ ಡಿಪೋನ ದೈನಂದಿನ ಕಾರ್ಯಚಟುವಟಿಕೆಗೆ ಅಡಚಣೆಯಾಗಲಿದೆ ಎಂದಿದ್ದಾರೆ.