ಪದವಿ ಕಾಲೇಜಿಗೆ ಈ ವರ್ಷವೂ ಕನಸಿನ ಕೊಠಡಿ
ಕ.ಪ್ರ.ವಾರ್ತೆ ತುಮಕೂರು ಜೂ.21
ಇನ್ನೇನು ಪದವಿ ಕಾಲೇಜಿಗೆ ಕೊಠಡಿ ಸಿಕ್ಕೇ ಸಿಗುತ್ತದೆ. ಇನ್ನು ಮುಂದೆ ಕೊಠಡಿಗಾಗಿ ಪರದಾಡುವಂತಿಲ್ಲ ಎಂದೇ ನಂಬಿಕೊಂಡಿದ್ದ ವಿದ್ಯಾರ್ಥಿಗಳ ಕನಸು ಈಗ ಭಗ್ನ ಆಗಿದೆ.
ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ವರ್ಷವೂ ಕಾಲೇಜಿಗೆ ಕೊಠಡಿ ಇಲ್ಲದಂತಾಗಿದೆ. ಈ ಹಿಂದೆ ಕೊಠಡಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರ ಹಿನ್ನಲೆ ಮಾಜಿ ಸಚಿವ ಸೊಗಡು ಶಿವಣ್ಣ ಸರ್ಕಾರಿ ಜೂನಿಯರ್ ಕಾಲೇಜು ಹಿಂಭಾಗದಲ್ಲಿ 5 ಎಕರೆ ಜಾಗ ಮಂಜೂರು ಮಾಡಿದ್ದರು.
ಅಲ್ಲದೇ ಶೈಕ್ಷಣಿಕ ವರ್ಷದಾರಂಭದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಲೋಕಪಯೋಗಿ ಇಲಾಖೆಗೆ ಸೂಚಿಸಿದ್ದರು. ಇದರ ಮಧ್ಯೆ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದರು. ಚುನಾವಣೆಗೂ ಮುನ್ನ ಶಂಕುಸ್ಥಾಪನೆ ನೆರವೇರಿಸಿ ಹಣವನ್ನು ಸಹ ಮಂಜೂರು ಮಾಡಲಾಗಿತ್ತು. ಆದರೆ ಜೂನ್ ಅಂತ್ಯವಾದರೂ ಕಾಮಗಾರಿ ಆರಂಭ ಮಾಡಿಲ್ಲ. ಕಾಮಗಾರಿ ವಿಳಂಬ ಕುರಿತು ಕೆಎಚ್‌ಬಿ ಹಾಗೂ ಪಿಡಬ್ಲುಡಿ ಇಲಾಖೆ ಅಧಿಕಾರಿಗಳನ್ನು ಕಾಲೇಜು ಆಡಳಿತ ಮಂಡಳಿ ವಿಚಾರಿಸಿದಾಗ ಯಾವುದೇ ಉತ್ತರ ಕೊಡದೆ ಮೌನ ವಹಿಸುತ್ತಾರೆ.
ವಿದ್ಯಾರ್ಥಿ ಸಂಖ್ಯೆ 4 ಸಾವಿರ ದಾಟಲಿದೆ: ಮಾಜಿ ಸಚಿವ ಎಸ್. ಶಿವಣ್ಣರ ಒತ್ತಾಸೆ ಮೇರೆಗೆ 2011 ರಲ್ಲಿ ಆರಂಭವಾದ ಪದವಿ ಕಾಲೇಜು, ಪಿಯು ಕಾಲೇಜಿನ ಮುರುಕಲು ಕಟ್ಟಡದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದೆ. ಕಳೆದ ಎರಡು ವರ್ಷದಲ್ಲಿ ದಾಖಲೆಯ 2400 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದರು. ಇದರ ಜೊತೆಗೆ ಈ ವರ್ಷ ಅಂತಿಮ ವರ್ಷ ಕೂಡ ಪ್ರಾರಂಭವಾಗುತ್ತಿದ್ದು ಹೊಸದಾಗಿ ಪದವಿ ಪ್ರವೇಶ ಪಡೆಯುವರು ಸೇರಿ 3 ವರ್ಷದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 4 ಸಾವಿರ ದಾಟಲಿದೆ. ಈಗಲೇ ಕೊಠಡಿ ಒದಗಿಸಲು ಹೈರಾಣಾಗಿದ್ದ ಆಡಳಿತ ಮಂಡಳಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.
ಪಿಡಬ್ಲುಡಿಗೆ 60 ಲಕ್ಷ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣದ ಜೊತೆಗೆ ಪ್ರಯೋಗಾಲಯ ಮತ್ತು ಶೌಚಾಲಯ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ಕಳೆದ ಮಾರ್ಚ್ 1 ರಂದು 60 ಲಕ್ಷ ಮಂಜೂರು ಮಾಡಲಾಗಿದೆ. ಹಣ ಪಡೆದ ಇಲಾಖೆ ಇಂದಿನವರಗೆ ಈ ಕಡೆ ತಿರುಗಿ ನೋಡಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯ: 3.5 ಕೋಟಿ ವೆಚ್ಚದ 24 ಕೊಠಡಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳು ಮೊದಲ ಕಂತಿನ ಹಣ 1 ಕೋಟಿ 5 ಲಕ್ಷ ರು.ಗಳನ್ನು ಪಡೆದಿದ್ದು ಈವರೆಗೆ ಕಾಮಗಾರಿ ಆರಂಭಿಸಿಲ್ಲ. ಈ ಅಧಿಕಾರಿಗಳನ್ನು ಪ್ರಶ್ನಿಸುವರು ಯಾರು ಎಂಬ ಪ್ರಶ್ನೆ ಉದ್ಭವವಾಗಲಿದೆ. ನೂತನ ಶಾಸಕ ಡಾ.ಕೆ.ರಫೀಕ್ ಅಹ್ಮದ್ ಮೃದುಧೋರಣೆ ತೊರೆದು ಇಂತಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ವಿದ್ಯಾರ್ಥಿ ಹಿತದೃಷ್ಟಿಯಿಂದ ಒಳಿತೆನಿಸಿದೆ. ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ಕಾಮಗಾರಿ ಆರಂಭಿಸದ ಸಂಬಂಧಪಟ್ಟ ಇಲಾಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರರೇ ತಾಕೀತು ಮಾಡಬೇಕಿದೆ.