ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪೂಜೆಗೆ ಫಲ ಸಿಗದು, ಶ್ರಮ ಅಗತ್ಯ: ವೀರೇಂದ್ರ ಹೆಗ್ಗಡೆ

Mainashree
Updated On : 21 Jun 2013, 11:42 am

ಕ.ಪ್ರ.ವಾರ್ತೆ  ತುಮಕೂರು   ಜೂ.20
ಪೂಜೆ ಮಾಡಿ ಸುಮ್ಮನೆ ಕುಳಿತರೆ ಕೆಲಸವಾಗದು. ದೇವರನ್ನು ನಂಬಿ ಪೂಜೆ ಮಾಡಬೇಕು. ಕಷ್ಟಪಡಬೇಕು, ಆಶೀರ್ವಾದ ಕೇಳಬೇಕು. ಹೀಗಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಪ್ರತಿಪಾದಿಸಿದರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ಥಾಪಿಸಲಾಗಿರುವ ತುಮಕೂರು ಸಮೀಪದ ಅರೆಗುಜ್ಜನಹಳ್ಳಿಯ ಭುವನೇಶ್ವರಿ ಪ್ರಗತಿಬಂಧು ಸ್ವ ಸಹಾಯ ಸಂಘದ ಸದಸ್ಯೆ ಸುಧಾ ಅವರ ಕೃಷಿ ಕ್ಷೇತ್ರ ಭೇಟಿ ನಂತರ ತಂಡದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ಕರ್ತವ್ಯ ಮಾಡಲ್ಲ, ಶ್ರಮ ಪಡಲ್ಲ ಅನ್ನುವ ಮಂದಿ ಒಳ್ಳೆಯ ಬೆಳೆ ನಿರೀಕ್ಷೆ ಇಟ್ಟುಕೊಂಡರೆ ಹೇಗೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ದೇವರನ್ನು ನಂಬಿ, ಶ್ರಮ ಪಟ್ಟರೆ ಫಲ ಸಾಧ್ಯ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವಂತೆ ಕರೆ ನೀಡಿದರು.
ಶೇ. 99.19 ಸಾಲ ಮರುಪಾವತಿ: ಗ್ರಾಮಾಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ನೀಡಲಾಗಿರುವ ಸಾಲದಲ್ಲಿ ಶೇ. 99.19 ರಷ್ಟು ಸಾಲ ಮರುಪಾವತಿಯಾಗಿದೆ. ಇದು ಉತ್ತಮ ಬೆಳವಣಿಗೆ. ಎಲ್ಲಿ ಸಾಲ ಮರುಪಾವತಿಯಾಗುತ್ತೋ ಅಲ್ಲಿ ಸಾಲ ಸದ್ಬಳಕೆಯಾಗಿದೆ, ಪ್ರಗತಿಯ ಸೂಚಕವಾಗಿದೆ ಎಂದರ್ಥ ಎಂದು ತಿಳಿಸಿದರು.
ಸಾಲ ಶೂಲವಾಗಬಾರದು: ಸಾಲ ನೀಡಲು ಮನೆಗೆ ಬಂದಾಗ ಸೇವಾ ಪ್ರತಿನಿಧಿಗಳು ದೇವತೆಗಳಂತೆ ಕಾಣುತ್ತಾರೆ. ಆದರೆ ಅದೇ ಪ್ರತಿನಿಧಿಗಳು ಸಾಲ ವಸೂಲಾತಿ ಸಂದರ್ಭದಲ್ಲಿ ಮಾರಿಗಳಂತೆ ಕಾಣುತ್ತಾರೆ. ಸಾಲ ಶೂಲವಾಗಬಾರದು. ಸಾಲ ಪಡೆದ ಪ್ರತಿಯೊಬ್ಬ ಸದಸ್ಯರ ಬದುಕಿನಲ್ಲಿ ಪರಿವರ್ತನೆ ಕಾಣಬೇಕು, ಬಡತನ ರೇಖೆಯಿಂದ ಎಲ್ಲರೂ ಮೇಲೇಳಬೇಕು ಎಂಬುದು ನಮ್ಮ ಆಶಯ ಎಂದರು.
ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಗ್ರಾಮಾಭಿವೃದ್ಧಿ ಒಕ್ಕೂಟಗಳು ಪ್ರಗತಿಯತ್ತ ದಾಪುಗಾಲಿಟ್ಟಿವೆ. ಸಂಘದಲ್ಲಿನ ಬಹುತೇಕ ಮಹಿಳಾ ಸದಸ್ಯರು ವಿದ್ಯಾವಂತರಾಗಿದ್ದು, ಅವರಲ್ಲಿ ಆತ್ಮವಿಶ್ವಾಸ ಮೂಡಿದೆ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.
ಗೊಬ್ಬರ, ಬೀಜಕ್ಕೆ ದುಡ್ಡಿರಲಿಲ್ಲ: ಸಣ್ಣ ರೈತರು ಬೀಜ, ಗೊಬ್ಬರ ಕೊಳ್ಳಲು ಹಣವಿಲ್ಲದೆ, ಬೇರೊಬ್ಬರ ಬಳಿ ಕೈ ಚಾಚಬೇಕಿತ್ತು. ಈಗ ಯೋಜನೆಯಿಂದ ಹಣ ಪಡೆದವರು ತಾವೇ ಸ್ವಾವಲಂಬನೆ ಸಾಧಿಸಿದ್ದು, ಕೃಷಿಯಲ್ಲಿ ಆದಾಯ ಗಳಿಸುತ್ತಿದ್ದಾರೆ ಎಂದ ವೀರೇಂದ್ರ ಹೆಗ್ಗಡೆ, ತಾವು ಬೆಳೆದ ಬೆಳೆಗೆ ಮಾರುಕಟ್ಟೆ ಕಂಡುಕೊಳ್ಳಲು ಯೋಚಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ, ಅಳಿಯ ಅಮಿತ್, ನಿಶ್ಚಲ್, ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ಧೇಶಕ ಪಿ. ಗಂಗಾಧರ ರೈ, ಸದಾಶಿವಲಾಲ್ ಇತರರು ಉಪಸ್ಥಿತರಿದ್ದರು.


ಪರಿವರ್ತನೆ ಮಂತ್ರವಾಗಬೇಕು
ಪರಿವರ್ತನೆ ನಮ್ಮ ಮಂತ್ರವಾಗಬೇಕು. ನಾವಿರೋದೇ ಹೀಗೆ ಅಂತ ಕೈ ಚೆಲ್ಲಿ ಕುಳಿತುಕೊಳ್ಳುವುದು ಸಲ್ಲ. ಯಾರೋ ಬರ್ತಾರೆ, ನಮ್ಮನ್ನು ಬದಲಾವಣೆ ಮಾಡ್ತಾರೆ ಅಂತ ಇದ್ದರಾಗದು. ಬದಲಾವಣೆ ನಮ್ಮಲ್ಲೇ ಬರಬೇಕು ಎಂದು ವೀರೇಂದ್ರ ಹೆಗ್ಗಡೆ ಪ್ರತಿಪಾದಿಸಿದರು. ಶ್ರಮಕ್ಕೆ ಫ್ರತಿಫಲ ಸಿಕ್ಕೇ ಸಿಗುತ್ತೆ. ಪರಿವರ್ತನೆ ಹಾದಿಯಲ್ಲಿ ಎಲ್ಲರೂ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement