ಲೋಕಾಯುಕ್ತ ನಿರೀಕ್ಷಕರಿಂದ ಜನರ ಅಹವಾಲು ಸ್ವೀಕಾರ
ಚಿಕ್ಕನಾಯಕನಹಳ್ಳಿ: ಹಿಂದಿನ ಜನಸಂಪರ್ಕ ಸಭೆಯಲ್ಲಿ ಬಂದಿದ್ದ 18 ದೂರುಗಳ ಪೈಕಿ ಈಗಾಗಲೇ 13 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ 5 ದೂರುಗಳಿಗೆ ಕಾಲಮಿತಿಯಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಲೋಕಾಯುಕ್ತ ನಿರೀಕ್ಷಕರಾದ ಗೌತಮ್ರವರು ನುಡಿದರು.
ಜೂ.21ರಂದು ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರನ್ನು ಖುದ್ದು ವಿಚಾರಣೆ ನಡೆಸಿ ಮಾತನಾಡುತ್ತಿದ್ದರು.
ಈ ಹಿಂದಿನ ಜನಸಂಪರ್ಕ ಸಭೆಯಲ್ಲಿ 18 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಈಗಾಗಲೇ 13 ದೂರುಗಳನ್ನು ಬಗೆಹರಿಸಲಾಗಿದೆ. ಉಳಿದ 5ಕ್ಕೆ ತ್ವರಿತವಾಗಿ ಪರಿಹಾರ ಒದಗಿಸಬೇಕೆಂದು ಸಂಬಂಧಿಸಿದ ಇಲಾಖೆಗೆ ಸೂಚಿಸಿದರು.
ಶುಕ್ರವಾರ ಬಂದಿರುವ 8 ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ರವಾನಿಸಿ ಮುಂದಿನ 15 ದಿನಗಳಲ್ಲಿ ಅವರ ಸಮಸ್ಯೆಯನ್ನು ಬಗೆಹರಿಸಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಇಓ ತಿಮ್ಮಯ್ಯ, ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ, ಸಹಾಯಕ ಕೃಷಿ ಅಧಿಕಾರಿ ಕೃಷ್ಣಪ್ಪ, ಪಿಎಸ್ಐ ಗೋವಿಂದು ಮುಂತಾದವರಿದ್ದರು.
'ರಂಜಕಯುಕ್ತ ಗೊಬ್ಬರಗಳ ಬಳಕೆ ಮಾಡಿ'
ಶಿರಾ: ಎಲ್ಲಾ ಬೆಳೆಗಳಲ್ಲೂ ರೈತರು ಡಿ.ಎ.ಪಿ. ಬದಲು ಎಸ್.ಎಸ್.ಪಿ. ಮತ್ತು ಇತರೆ ರಂಜಕಯುಕ್ತ ಗೊಬ್ಬರಗಳ ಬಳಕೆ ಮಾಡಿ ಎಂದು ಮಣ್ಣು ವಿಜ್ಞಾನಿ ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ರಮೇಶ್ ರೈತರಿಗೆ ಸಲಹೆ ನೀಡಿದರು. ಅವರು ಶಿರಾ ಸಹಾಯಕ ಕೃಷಿ ನಿರ್ದೆಶಕರ ಕಚೇರಿಯಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ಆತ್ಮ ಯೋಜನೆಯಡಿ ರೈತರು ಮತ್ತು ರೈತ ಮಹಿಳೆಯರಿಗೆ ಹಮ್ಮಿಕೊಂಡಿದ್ದ ರೈತಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಹಾಯಕ ಕೃಷಿ ನಿರ್ದೆಶಕರಾದ ಡಾ.ವೀರಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಂತ್ರಿಕ ಅಧಿಕಾರಿ ಕೆ.ಗೋವಿಂದಯ್ಯ, ಬಿ.ಶಿವಣ್ಣ, ಡಿ.ಧನಲಕ್ಷ್ಮಿ, ರೈತರು ಭಾಗವಹಿಸಿದ್ದರು.