ಸೋರುತ್ತಿದೆ ಸಾರ್ವಜನಿಕ ಆಸ್ಪತ್ರೆ ನೂತನ ಕಟ್ಟಡ
ಕುಣಿಗಲ್: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿ, ಆಡಳಿತ ವರ್ಗದ ನಿಷ್ಕ್ರಿಯತೆಯಿಂದಾಗಿ ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಮುನ್ನವೇ ಸೋರುವಂತಾಗಿದೆ.
ಸರ್ಕಾರ ಜನತೆಗೆ ಉತ್ತಮ ಆರೋಗ್ಯ ಕಲ್ಪಿಸುವ ದಿಸೆಯಲ್ಲಿ, ಈ ಹಿಂದಿನ ಶಾಸಕರಾದ ಎಚ್.ನಿಂಗಪ್ಪನವರ ಅವಧಿಯಲ್ಲಿ 197 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಾಲಿ ಇದ್ದ ಐವತ್ತು ಹಾಸಿಗೆ ಆಸ್ಪತ್ರೆಯನ್ನು ನೂರು ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ 2008ರಲ್ಲಿ ಚಾಲನೆ ನೀಡಲಾಯಿತು.
ಕಾಮಗಾರಿ ಕುಂಟುತ್ತಾ ಸಾಗಿ 2010-11ನೇ ಸಾಲಿಗೆ ಪೂರ್ಣಗೊಂಡರೂ, ಸ್ಥಳೀಯ ಜನಪ್ರತಿನಿಧಿಗಳ ಆಂತರಿಕ ತಿಕ್ಕಾಟದ ಪರಿಣಾಮ ಆಸ್ಪತ್ರೆ ಕಟ್ಟಡ ಪೂರ್ಣಗೊಂಡು, ಬೇಕಾದ ಹಾಸಿಗೆ, ಮಂಚಗಳೆಲ್ಲಾ ಪೂರೈಕೆಯಾದರೂ, ಇನ್ನೂ ಉದ್ಘಾಟನೆ ಭಾಗ್ಯ ಕಾಣದೆ ಇದ್ದೂ ಇಲ್ಲದಂತ ಸ್ಥಿತಿಗೆ ತಲುಪಿ, ಮೇಲಂತಸ್ತಿನ ಕೆಲ ಕೊಠಡಿಗಳು ಧೂಳುಮಯವಾಗಿದ್ದರೆ, ಇನ್ನು ಕೆಲ ಕೊಠಡಿಗಳು ದಿನಗೂಲಿ ನೌಕರರ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಗಿಡ, ಮರ: ಸಾರ್ವಜನಿಕ ಆಸ್ಪತ್ರೆಯ ಆಡಳಿತ ವಿಭಾಗದ ಹಾಗೂ ನಿರ್ವಹಣಾ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಹೊಸದಾಗಿ ನಿರ್ಮಾಣಗೊಂಡ ಕೋಟ್ಯಂತರ ವೆಚ್ಚದ ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದು, ಮೇಲ್ಚಾವಣಿಯ ತಾರಸಿಯ ಮೇಲೆ ಬೇರು ಬಿಟ್ಟು ಶಿಥಿಲಗೊಂಡಂತಾಗಿ, ತುಸು ಜೋರಾಗಿ ಮಳೆ ಬಂದರೆ ಕೆಳಗಡೆಯ ಕೊಠಡಿಗಳಲ್ಲಿ ಸೋರುವಂತಾಗಿದೆ.
ಇನ್ನು ಕೆಲವೆಡೆ ಆರಳಿಮರ ಕಾಂಡ ಬೆಳೆದು, ಗೋಡೆಯನ್ನು ಎರಡು ಭಾಗ ಮಾಡಲು ಸಿದ್ದವಾಗಿದೆ. ಇನ್ನು ಮೇಲ್ಚಾವಣಿಯ ಕೆಲವೆಡೆಗಳಲ್ಲಿ ಕಾಮಗಾರಿಗಾಗಿ ತಂದು ಹಾಕಲಾದ ಮರಳಿನ ರಾಶಿಯ ಮೇಲೆ ಹುಣಸೆ ಸಸಿಗಳು ಯಥೇಚ್ಚವಾಗಿ ಬೆಳೆದು, ಸಾರ್ವಜನಿಕ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ.
ಕಟ್ಟಡ ಪೂರ್ಣಗೊಂಡರೂ, ಜನತೆಯ ಉಪಯೋಗಕ್ಕೆ ಬರುವ ಮುನ್ನ ಸ್ಥಳೀಯ ಸಿಬ್ಬಂದಿಯ ನಿರ್ವಹಣೆ ಕೊರತೆಯಿಂದ ಶಿಥಿಲಗೊಳ್ಳುವಂತಾಗಿರುವುದು ತೀರಾ ಖೇದಕರ ಸಂಗತಿ ಎಂದು ಯುವಮುಖಂಡ ಗುರುಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿನವೊಂದಕ್ಕೆ ಕನಿಷ್ಠ ಇನ್ನೂರರಿಂದ ಸಾವಿರವರೆಗೂ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಆಸ್ಪತ್ರೆಯ ಕಟ್ಟಡವನ್ನು ಸಂಬಂಧಪಟ್ಟ ಸಿಬ್ಬಂದಿ ನಿರ್ಲಕ್ಷ್ಯವಹಿಸದೆ ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಆಗ್ರಹಿಸಿದ್ದಾರೆ.
ಮೇಲ್ದರ್ಜೆಗೇರಿರುವ ಆಸ್ಪತ್ರೆ ಕಟ್ಟಡ ಉದ್ಘಾಟಿಸುವ ಮೂಲಕ ನೂತನ ಶಾಸಕರು ಜನತೆಯ ಸೇವೆಗೆ ಸಮರ್ಪಿಸುವಂತೆ ಮನವಿ ಮಾಡಿದ್ದಾರೆ.
ಆನಂದ್ ಸಿಂಗ್ ಟಿ.ಎಚ್.