25 ರಂದು ಶಿರಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಶಿರಾ: ಜೂ. 25 ರ ಮಂಗಳವಾರದಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜೃಂಭಣೆಯಿಂದ ಶಿರಾದಲ್ಲಿ 2ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷರಾಗಿ ಪತ್ರಕರ್ತ ಎಸ್.ನಾಗಣ್ಣ ಅವರು ಭಾಗವಹಿಸಲಿದ್ದು ಸಮ್ಮೇಳನದ ಉದ್ಘಾಟನೆಯನ್ನು ಸಚಿವ ಟಿ.ಬಿ.ಜಯಚಂದ್ರ ಅವರು ನೇರವೇರಿಸುವರು. ಗೋಷ್ಠಿಗಳು ನಡೆಯಲಿದ್ದು ಡಾ.ರಾಮಲಿಂಗಪ್ಪ ಅವರು ಸಾಹಿತ್ಯ ಗೋಷ್ಠಿಯನ್ನು ಪ್ರೊ.ಕೆ.ಹನುಮಂತರಾಯಪ್ಪ ಅವರು ಕವಿಗೋಷ್ಠಿಯನ್ನು, ಪ್ರಾಚಾರ್ಯ ಕೆ. ಸೋಮಶೇಖರಪ್ಪ ಉದ್ಘಾಟಿಸುವರು. ಅಭಿಮಾನಿಗಳು ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷರಾದ ವೈ.ನರೇಶ್ ಬಾಬು ತಿಳಿಸಿದ್ದಾರೆ.
ಇಂದು ಶ್ರೀಮಠದಲ್ಲಿ ಪೂರ್ವಭಾವಿ ಸಭೆ
ತಿಪಟೂರು: ತಾಲೂಕಿನ ಪವಿತ್ರ ಯಾತ್ರಾ ಕ್ಷೇತ್ರ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ಸರ್ವತೋಮುಖ ಏಳ್ಗೆಗೆ ಕಾರಣಕರ್ತರೂ, ಪ್ರಸ್ತುತ ಸುಕ್ಷೇತ್ರಾಧ್ಯಕ್ಷರೂ ಆದ 7ನೇ ಶ್ರೀಗಳಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು 60 ಸಂವತ್ಸರಗಳನ್ನು ಪೂರೈಸಿ 61ನೇ ವರ್ಷಕ್ಕೆ ಪಾರ್ದಾಪಣೆ ಮಾಡಿದ್ದಾರೆ. ಪೂಜ್ಯರಿಗೆ 60ನೇ ವರ್ಷದ ಜನ್ಮ ದಿನೋತ್ಸವ ಆಚರಿಸುವ ಸಲುವಾಗಿ ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ವಾರ್ಷಿಕ ಮಹಾಸಭೆಯನ್ನು ಭಾನುವಾರ ಮಧ್ಯಾಹ್ನ 12ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಇಂದು ಶರಣ ಧರ್ಮ ಚಿಂತನಾ ಗೋಷ್ಠಿ
ತಿಪಟೂರು: ನಗರದ ಗುರುಕುಲ ಸಭಾಂಗಣದಲ್ಲಿ 200ನೇ ಬೆಳದಿಂಗಳ ಹಾಗೂ ಡಾ.ಜಯದೇವಿ ತಾಯಿ ಲಿಗಾಡೆಯವರ 100ನೇ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಭಾನುವಾರ ಸಂಜೆ 6.45ಕ್ಕೆ ಏರ್ಪಡಿಸಲಾಗಿದೆ. ಸಾನಿಧ್ಯವನ್ನು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಗುರುಕುಲ ಹಿರಿಯ ವಿದ್ಯಾರ್ಥಿ ಎಂ.ಟಿ. ವಿಶ್ವನಾಥಯ್ಯ ನೆರವೇರಿಸಲಿದ್ದಾರೆ. ಕನ್ನಡ ಉಪನ್ಯಾಸಕರಾದ ಎಂ.ಜಿ. ಸಿದ್ದರಾಮಯ್ಯ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೇಣುಕಾರಾಧ್ಯ, ನ್ಯಾಯವಾದಿಗಳಾದ ಎಸ್.ವಿ. ರವೀಂದ್ರನಾಥ ಠಾಗೂರ್, ಸಮಾಜ ಸೇವಕ ಪೌಳಿ ಶಂಕರಾನಂದಪ್ಪ, ವಕೀಲ ಈ. ಲೋಕೇಶ್ವರಪ್ಪ, ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾ.ಅಧ್ಯಕ್ಷ ಪ್ರಸನ್ನ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಗುವುದು.