3 ಕೋಟಿ ಅವರೇ, 6 ಕೋಟಿಗೂ ಅವರೇ...
ಕ.ಪ್ರ.ವಾರ್ತೆ ತುಮಕೂರು ಜೂ. 22
ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ನೌಕರರ ನೇಮಕವಾಗುತ್ತಿಲ್ಲ ಎಂದು ರಾಜ್ಯ ಸಂಘದ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷ ಜಿ.ಎಂ. ಸಣ್ಣಮುದ್ದಯ್ಯ ವಿಷಾದಿಸಿದರು.
3 ಕೋಟಿ ಜನಸಂಖ್ಯೆ ಇದ್ದಾಗ ಇರುವಷ್ಟೇ ಸರ್ಕಾರಿ ನೌಕರರು 6 ಕೋಟಿ ಜನಸಂಖ್ಯೆಯಾದಾಗಲೂ ಇದ್ದಾರೆ. ಆದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ನೌಕರರ ನೇಮಕವಾಗಬೇಕು ಎಂದರು.
ರಾಜ್ಯ ಸರಕಾರ ಜನರಿಗೆ ಶೀಘ್ರ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದ್ದು ಇದರಿಂದ ಹಲವಾರು ತೊಂದರೆಗಳು ಉಂಟಾಗುತ್ತಿವೆ. ಒಂದು ವೇಳೆ ಅವರು ತಪ್ಪು ಮಾಡಿದರೆ ಅವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಲು ಬರುವುದಿಲ್ಲ ಎಂದರು. ಹೊಸದಾಗಿ ಸರಕಾರಿ ನೌಕರಿಗೆ ಬರುವವರಿಗೆ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಕಾನೂನುಗಳು ಪರಿಚಯ ಮಾಡಿಸುವ ನಿಟ್ಟಿನಲ್ಲಿ ಒಂದು ಪುಸ್ತಕವನ್ನು ಹೊರತರುವುದು ಮತ್ತು ಕಾನೂನಿನ ಅರಿವು ಮೂಡಿಸುವ ಕೆಲಸ ಇಲಾಖೆಯಿಂದ ಆಗಬೇಕಾಗಿದೆ. ಸಾರ್ವಜನಿಕರೆದರು ಯುವ ಸರಕಾರಿ ನೌಕರರ ಮಾನಸಿಕವಾಗಿ ಕುಗ್ಗದಂತೆ ಇಲಾಖೆ ಅಗತ್ಯ ತರಬೇತಿ ನೀಡಬೇಕೆಂದು ಜಿ.ಎಂ.ಸಣ್ಣಮುದ್ದಯ್ಯ ಡಾ.ಶಾಲಿನಿ ರಜನೀಶ್ ಅವರಲ್ಲಿ ಮನವಿ ಮಾಡಿದರು.
ಸರಕಾರಿ ನೌಕರರ ಸಂಘ ಕೇವಲ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಾತ್ರ ಸಿಮೀತವಾಗಿಲ್ಲ. ಸಾಮಾಜಿಕ ಸೇವೆಗೂ ಸಿದ್ದವಿದೆ ಎಂಬುದನ್ನು ಇಡೀ ಸಮಾಜಕ್ಕೆ ತೋರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಾತಿಯ ಹೆಸರಿನಲ್ಲಿ ಯುವ ಮನಸ್ಸುಗಳ ನಡುವೆ ವಿಷ ಬೀಜ ಬಿತ್ತುವುದಕ್ಕಿಂತ ಜಾತ್ಯತೀತವಾಗಿ ಎಲ್ಲಾ ಪ್ರತಿಭೆಗಳನ್ನು ಅಭಿನಂದಿಸುವ ಕಾರ್ಯವನ್ನು ಕಳೆದ 18 ವರ್ಷಗಳಿಂದ ಮಾಡುತ್ತಾ ಬಂದಿದ್ದು,ರಾಜ್ಯದ 175 ತಾಲೂಕು ಶಾಖೆ, 30 ಜಿಲ್ಲಾ ಶಾಖೆಗಳಲ್ಲಿಯೂ ಈ ಕಾರ್ಯ ನಡೆಯುತ್ತಿದೆ ಎಂದರು.