ಐತಿಹಾಸಿಕ ಈಜು ಕೊಳಕ್ಕೆ ಪುನಶ್ಚೇತನ
ಕ.ಪ್ರ.ವಾರ್ತೆ ಮಧುಗಿರಿ ಜೂ. 22
ಕನ್ನಡದ ಆಸ್ತಿ, ಮಾಸ್ತಿ ಅವರು 1934ರಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಆಗಿದ್ದಾಗ ಜನೋಪಾಯೋಗಕ್ಕಾಗಿ ಪಟ್ಟಣದ ತುಮಕೂರು ಗೇಟ್ಬಳಿ ಕಟ್ಟಿಸಿದ್ದ ಐತಿಹಾಸಿಕ ಈಜು ಕೊಳ ಇಂದು ಅವಾಸನದ ಅಂಚಿನಲ್ಲಿದ್ದು ಅದನ್ನು ಪುನಶ್ಚೇತನಗೊಳಿಸಿ ಅತ್ಯಾಧುನಿಕ ಈಜು ಕೊಳವನ್ನಾಗಿ ಮಾರ್ಪಡಿಸುವುದಾಗಿ ಶಾಸಕ ಕೆ.ಎನ್.ರಾಜಣ್ಣ ಭರವಸೆ ನೀಡಿದರು.
ಇಲ್ಲಿನ ಮಾಲಿಮರಿಯಪ್ಪ ರಂಗಮಂದಿರದಲ್ಲಿ 2 ದಿನಗಳ ಕಾಲ ನಡೆದ ತಾ.5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಐತಿಹಾಸಿಕ ಈಜು ಕೊಳ ಪಾಳು ಬಿದ್ದಿದ್ದು ಅದನ್ನು ಪುನಶ್ಚೇತನಗೊಳಿಸಿ ಸಾರ್ವಜನಿಕರ ಬಳಕೆಗೆ ಸಮರ್ಪಿಸೋಣ, ಅಪೂರ್ಣಗೊಂಡಿರುವ ಕನ್ನಡ ಭವನ ಕಟ್ಟೋಣ, ಈ 2 ದಿನದ ಸಮ್ಮೇಳನ ಮಧುಗಿರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದರ ಹಿಂದೆ ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಮತ್ತು ಪದಾಧಿಕಾರಿಗಳ ಪರಿಶ್ರಮ ಅಡಗಿದೆ. ಇಂತಹ ಸಮ್ಮೇಳನಗಳು ಜನರಲ್ಲಿ ಕನ್ನಡಾಭಿಮಾನ ಅರಳಿಸುವ ಜತೆಗೆ ಭಾಷೆ ಒಂದು ಶಕ್ತಿಯಾಗಿ ಜನ ಮನ ಒಗ್ಗೂಡಿಸುತ್ತದೆ. ಮಧುಗಿರಿ ಗಾಂಧಿ ಎಂದೇ ಖ್ಯಾತರಾದ ದಿ.ಎಂ. ಪುಟ್ಟತಿಮ್ಮಯ್ಯ ಅವರ ಹೆಸರಲ್ಲಿ ಸಮ್ಮೇಳನ ಸಭಾಂಗಣಕ್ಕೆ ನಾಮಕರಣ ಮಾಡಿರುವುದು ಹೆಮ್ಮಯ ವಿಚಾರ, ಮುಂದೆ ಪಟ್ಟಣದ ಯಾವುದಾದರು ಒಂದು ರಸ್ತೆಗೆ ದಿ. ಎಂ.ಪುಟ್ಟತಿಮ್ಮಯ್ಯ ಎಂದು ನಾಮಕರಣ ಮಾಡೋಣ. ಹೀಗೆ ಸಮಾಜಮುಖಿ ಕೆಲಸ ಮಾಡಿದವರನ್ನು ನೆನೆಯುತ್ತಾ ಸಮ್ಮೇಳನ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಲು ಪ್ರಯತ್ನಿಸಬೇಕು ಎಂದರು.
ದೂಷಿಸುವುದು ಬೇಡ: ಕನ್ನಡ ಶಾಲೆ ಮುಚ್ಚುತ್ತಿರುವುದಕ್ಕೆ ಸರ್ಕಾರವನ್ನು ದೂಷಿಸುವುದು ಬೇಡ, ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿ ಕನ್ನಡ ಕಲಿಸಿದರೆ ಮುಚ್ಚುವ ಪ್ರಮಯವೇ ಇಲ್ಲ ಎಂದ ರಾಜಣ್ಣ ಮಧುಗಿರಿ ಅತ್ಯಂತ ಭೀಕರ ಬರಗಾಲಕ್ಕೆ ಸಿಕ್ಕಿ ಈ ಭಾಗದ ಜನ ನರಳುತ್ತಿದ್ದಾರೆ. ಅದಕ್ಕಾಗಿ ಎಲ್ಲರೂ ಒಗ್ಗೂಡಿ ಹೋರಾಟದ ಮೂಲಕ ಶಾಶ್ವತ ನೀರಾವರಿ ಯೋಜನೆ, ಜಿಲ್ಲಾ ಕೇಂದ್ರ ಹೀಗೆ ಹತ್ತು ಹಲವು ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸೋಣ ಎಂದರು.
ಜೀವ ತುಂಬಿ: ತುಮಕೂರಿನ ಹಿರಿಯ ಸಾಹಿತಿ ಕವಿತಾ ಕೃಷ್ಣ ಕನ್ನಡ ಭಾಷೆ ಬಳಸುವವರು ಅನ್ಯ ಬಾಷಾ ಪದಗಳ ಮೆರವಣಿಗೆ ನಿಲ್ಲಿಸಿ. ಕನ್ನಡ ಪದಗಳಿಗೆ ಜೀವ ತುಂಬಬೇಕು ಎಂದರು. ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ ಕನ್ನಡ ಭವನ ನವಂಬರ್ ವೇಳೆಗೆ ಉದ್ಘಾಟನೆ ಆಗಬೇಕು. ಗಡಿ ಭಾಗ ಮಧುಗಿರಿ ತಾ.ಕನ್ನಡ ಗಟ್ಟಿಗೊಳ್ಳಬೇಕು.ಇಲ್ಲಿ ಕೆ.ಎನ್. ರಾಜಣ್ಣ ಗೆದ್ದಿರುವುದು ಎಲ್ಲರ ಬೆಳವಣಿಗೆಗೆ ಸಹಕಾರಿ, ಮಧುಗಿರಿಯಲ್ಲಿ ನಡೆಯುವ ಸಮ್ಮೇಳನ ವಿಶಿಷ್ಟವಾದುದು ಎಂದರು. ಸಮ್ಮೇಳನಾಧ್ಯಕ್ಷ ಎಂ.ಡಿ.ಶ್ರೀನಿವಾಸ್ ಪೂರ್ವಿಕರು ಉಳಿಸಿಕೊಂಡು ಬಂದಿರುವ ಭೂಮಿಯನ್ನು ಹಣದ ಆಸೆಗೆ ಹೊರ ರಾಜ್ಯದವರಿಗೆ ಮಾರಬೇಡಿ ಎಂದರು.
ಜಿಲ್ಲಾ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಚಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಕೆ.ಎನ್. ರಾಜಣ್ಣ, ಸಮ್ಮೇಳನಾಧ್ಯಕ್ಷ ಎಂ.ಡಿ. ಶ್ರೀನಿವಾಸ್, ಪುಂಡಲೀಕ ಹಾಲಂಬಿ ಮತ್ತಿತರರಿಗೆ ನೆನೆಪಿನ ಕಾಣಿಕೆ ನೀಡಿ ಕಸಾಪದಿಂದ ಸನ್ಮಾನಿಸಿದರು. ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ, ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಾಗಂಗಾಂಭಿಕೆ,ಎಂ.ಜಿ.ಶ್ರೀನಿವಾಸಮೂರ್ತಿ,ರಾಮಣ್ಣ, ಪಿ.ಸಿ.ಕೆ.ರೆಡ್ಡಿ, ಪ್ರೊ.ಮಲನ ಮೂರ್ತಿ, ಸೈಯದ್, ಮಹಾಲಿಂಗೇಶ್, ದ್ರೇಹಾಚಾರ್, ಎಂ.ಜಿ.ರಘು ಯಾದವ್, ಎಂ.ಜಿ.ಮಂಜುನಾಥ್, ಶಿಕ್ಷಕ ರಂಗಧಾಮಯ್ಯ,ಚಿಕ್ಕರಂಗಪ್ಪ,ಬಾಲೇನಹಳ್ಳಿ ಶಿವಣ್ಣ,ಚಿನ್ನತಿಮ್ಮಪ್ಪ,ಎನ್.ಗಂಗಣ್ಣ ,ಎಸ್.ಡಿ.ಕೃಷ್ಣಪ್ಪ ಇನ್ನು ಅನೇಖರು ಉಪಸ್ಥಿತರಿದ್ದರು. ಮುಜೂಂದಾರ್ ಸ್ವಾಗತಿಸಿದರು.