ಗಡಿ ಪ್ರಾಂತ್ಯದಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಲಿ
ಕ.ಪ್ರ.ವಾರ್ತೆ ಪಾವಗಡ ಜೂ. 22
ಗಡಿ ಪ್ರಾಂತ್ಯದಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಬೇಕು ಹಾಗೂ ಹೆಚ್ಚು ಹೆಚ್ಚು ಜಾನಪದ ಸಂಶೋಧನೆಗಳು ನಡೆಯುವ ಮೂಲಕ ತಾಲೂಕಿನಲ್ಲಿರುವ ಐತಿಹಾಸಿಕ ಸಂಪನ್ಮೂಲಗಳ ರಕ್ಷಣೆಗೆ ಸರ್ಕಾರ ಬದ್ಧವಾಗಬೇಕಿದೆ ಎಂದು ಕಸಾಪ ಸಮ್ಮೇಳನಾಧ್ಯಕ್ಷ ಹಾಗೂ ಇತಿಹಾಸ ಸಂಶೋಧಕ ವಿ.ಆರ್. ಚಲುವರಾಜನ್ ಅಭಿಪ್ರಾಯ ಪಟ್ಟರು.
ಅವರು ಶನಿವಾರ ತಾಲೂಕು ಕಸಾಪ ವತಿಯಿಂದ ಪಟ್ಟಣದ ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕನ್ನಡದವರಿಂದಲೇ ಕನ್ನಡಕ್ಕೆ ಕುತ್ತು ಬರುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು ದೇಶದಲ್ಲಿ ಒಟ್ಟು 20 ಭಾಷೆಗಳು ಅಳಿವಿನಂಚಿನಲ್ಲಿವೆ. ಅವುಗಳ ಪೈಕಿ ಕನ್ನಡ ಕೂಡ ಸೇರಿದೆ, ಅಲ್ಲದೇ ಭಾಷೆ ಉಳಿವಿಗಾಗಿ ಹೋರಾಟ ಮಾಡುವ ಬದಲು ಕನ್ನಡ ಭಾಷೆ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕಿದೆ ಎಂದರು. ಪಾವಗಡ ತಾಲೂಕು ತೆಲುಗುಮಯವಾಗಿರುವುದು ದುರದ್ರಷ್ಟಕರ, ಇಲ್ಲಿ ವಾಸವಾಗಿರುವ ನಾವು ಕರ್ನಾಟಕದಲ್ಲಿರುವ ಕನ್ನಡಿಗರಲ್ಲ, ಬದಲಿಗೆ ಆಂಧ್ರದಲ್ಲಿರುವ ಕನ್ನಡಿಗರು, ಅಲ್ಲದೇ ಮಿಶ್ರ ಭಾಷೆಯ ಪ್ರದೇಶದವರೆಂದು ನಕಾಶೆಯಲ್ಲಿ ನಮೂದಾಗಿದೆ ಎಂದರು.
ತೆಲಗುಮಯ: ಜೀವನೋಪಾಯಕ್ಕಾಗಿ ಪಟ್ಟಣಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದ್ದ ಕಾರಣ ತೆಲುಗುಮಯವಾಗಿದ್ದು, ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋದ ಇಲ್ಲಿನ ಮೂಲ ಕನ್ನಡಿಗರು ಕನ್ನಡ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಬರೀಗೈಯಲ್ಲಿ ತಾಲೂಕಿಗೆ ವಲಸೆ ಬಂದ ತೆಲಗು ಸೇರಿದಂತೆ ಇತರೆ ಭಾಷೆಯ ವಲಸಿಗರು ಅವರು ಆಗಮಿಸಿದ 2ವರ್ಷಗಳಲ್ಲಿಯೇ ವಿವಿಧ ವ್ಯವಹಾರಗಳು ಕೈಗೊಂಡು ಕೋಟ್ಯಧೀಶರಾಗಿದ್ದಾರೆ. ಪಟ್ಟಣದಲ್ಲಿ 2ಕೋಟಿ ರು. ವೆಚ್ಚದ ಮನೆಗಳು ಹಾಗೂ ಇತರೆ ಆಸ್ತಿ ಪಾಸ್ತಿಗಳು ಮಾಡಿಕೊಂಡು ಜೀವನ ನಡೆಸುತ್ತಿದ್ದು ಜನತೆ ನಗರ ಪ್ರದೇಶಗಳಿಗೆ ವಲಸೆ ಹೋದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು.
ಶೋಚನೀಯ: ದೇಶದಲ್ಲಿಯೇ 8 ಬಾರಿ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡ ಕನ್ನಡಕ್ಕೆ ರಾಜ್ಯದಲ್ಲಿ ಈ ಪರಿಸ್ಥಿತಿ ಒದಗಿರುವುದು ಶೋಚನೀಯ. ಶಿರಾ ಕಸಾಪ ಕಾರ್ಯಕ್ರಮವೊಂದರಲ್ಲಿ ಬರಗೂರರು ತಿಳಿಸಿದ ಪ್ರಕಾರ ರಾಜ್ಯದಲ್ಲಿ ಕನ್ನಡ ಸಮೃದ್ಧವಾಗಿದ್ದರೂ ಭಾಷೆ ಅನುಷ್ಠಾನದಲ್ಲಿ ಸರ್ಕಾರದ ಧೋರಣೆಗಳು ಕನ್ನಡಕ್ಕೆ ವಿರೋಧವಾಗಿವೆ. ಸರ್ಕಾರಿ ಕಚೇರಿಗಳಲ್ಲಿರುವ ಸರ್ಕಾರದ ಕೆಲಸ ದೇವರ ಕೆಲಸ ಎಂಬುವುದರ ಬದಲಿಗೆ ಇನ್ನೂ ಮುಂದೆ ಕನ್ನಡದ ಕೆಲಸ ದೇವರ ಕೆಲಸ ಎಂದು ನಾಮ ಫಲಕ ಬರೆಯುವುದು ಸೂಕ್ತವಾಗಿದೆ ಎಂದರು.
ಗೊಲ್ಲರಹಟ್ಟಿಗಳನ್ನು ಹೊರತು ಪಡಿಸಿದರೆ, ಕೆಲ ಜಾತಿಗಳಲ್ಲಿ ಮಾತ್ರ ಕನ್ನಡ ಭಾಷೆ ಸೀಮಿತವಾಗಿದ್ದು ಉಳಿದಂತೆ ರೆಡ್ಡಿ, ಕಮ್ಮ, ಒಕ್ಕಲಿಗ ಸಮುದಾಯ ಸೇರಿದಂತೆ ಬಹುತೇಕ ಸಮುದಾಯಗಳಲ್ಲಿ ತೆಲುಗು
ತಾಂಡವಾಡುತ್ತಿದೆ. ಜನತೆ ಕನ್ನಡ ಮಾತನಾಡುವಂತಾಗಬೇಕು. ಕನ್ನಡ ಪ್ರೇಮ ಎತ್ತಿ ಹಿಡಿಯಬೇಕು. ಕನ್ನಡ ಚಿತ್ರಗಳ ಬಗ್ಗೆ ಆಸಕ್ತಿ ವಹಿಸಬೇಕು ಎಂದ ಅವರು ನಟ ಸುಧೀಪ್, ಪ್ರಕಾಶ್ರಾಜ್, ಪಾವಗಡ ಪ್ರಕಾಶ್ ಸೇರಿದಂತೆ ವಿವಿಧ ಭಾಷೆಗಳ ವಿವಿಧ ರಂಗಗಳಲ್ಲಿ ಸೇವೆ ಮತ್ತು ಮೇರು ಖ್ಯಾತಿ ಪಡೆದವರೆಂದರೆ ನಮ್ಮ ಕನ್ನಡಿಗರು. ಐತಿಹಾಸಿಕ ಹಿನ್ನೆಲೆಯುಳ್ಳ ಕನ್ನಡವನ್ನು ರಾಜ್ಯ ಸೇರಿದಂತೆ ದೇಶದಲ್ಲಿ ಹೆಮ್ಮೆಯಿಂದ ಎತ್ತಿಡಿಯಿರಿ ಎಂದರು.
ಒತ್ತಾಯ: ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಿಸಿ ಫ್ಲೊರೈಡ್ ಯುಕ್ತ ನೀರು, ನೀರಾವರಿ ಅಭಿವೃದ್ಧಿಗೆ ನದಿ ಮೂಲದ ನೀರು ಸೇರಿದಂತೆ ನವಿಲುಗಳ ವಾಸ ಸ್ಥಾನವಾದ ಕೆ.ರಾಂಪುರ, ನೇಕಾರರ ಅಭಿವೃದ್ಧಿಗೆ ಪಟ್ಟಣದಲ್ಲಿ ಮಾರುಕಟ್ಟೆ, ಐತಹಾಸಿಕವಾಗಿ ಪ್ರಸಿದ್ಧಿ ಪಡೆದ ನಿಡಗಲ್ದುರ್ಗ ಹಾಗೂ ಕಾಡು ಧನಗಳು ಮತ್ತು ಗಿಡಮೂಲಕೆಗಳಿಗೆ ಹೆಸರಾದ ಕಾಮನದುರ್ಗ ಬೆಟ್ಟವನ್ನು ಅಭಿವೃದ್ಧಿ ಮತ್ತು ಅವುಗಳ ರಕ್ಷಣೆಗೆ ಸರ್ಕಾರದ ಗಮನ ಸೆಳೆಯಲು ಆಸಕ್ತಿ ವಹಿಸುವಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರಲ್ಲಿ ಒತ್ತಾಯಿಸಿದರು. ಸಾನಿಧ್ಯ ವಿವೇಕಾನಂದ ಆಶ್ರಮದ ಅಧ್ಯಕ್ಷ ಜಪಾನಂದಜೀ ವಹಿಸಿದ್ದು, ಅಧ್ಯಕ್ಷತೆಯನ್ನು ಶಾಸಕ ಕೆ.ಎಂ.ತಿಮ್ಮರಾಯಪ್ಪ, ಕಸಾಪ ಜಿಲ್ಲಾಧ್ಯಕ್ಷ ಸೋಮುಭಾಸ್ಕರಾಚಾರ್, ತಹಸೀಲ್ದಾರ್ ಮಹಮ್ಮದ್ ಆಲ್ತಾಪ್ ಪಾಷ, ಕಸಾಪ ಅಧ್ಯಕ್ಷ ಅಂತರಗಂಗೆ ಶಂಕರಪ್ಪ, ತಾಪಂ ಇಒ ರಂಗನಾಥ್, ಗಡಿನಾಡು ಘಟಕದ ಅಧ್ಯಕ್ಷ ಹ.ರಾಮಚಂದ್ರಪ್ಪ ತಾ.ಅಧ್ಯಕ್ಷ ಎನ್. ತಿಮ್ಮಾರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಜಂಪಯ್ಯ, ಜಿಪಂ ಸದಸ್ಯ ಆರ್.ಸಿ. ಅಂಜಿನಪ್ಪ, ಡಾ.ವೈ.ಎಸ್ ಹನುಮಂತರಾಯಪ್ಪ, ಸಾಹಿತಿ ಮೇಳವಾಯಿ ಗೋವಿಂದರೆಡ್ಡಿ, ಪುರಸಭೆ ಸದಸ್ಯ ಎಲ್. ವಸಂತ್, ತಾ.ಮಟ್ಟದ ಅಧಿಕಾರಿಗಳಾದ ಚೌಧರಿ, ಉಷಾ, ಪಾರ್ವತಮ್ಮ, ಪುಟ್ಟರಂಗಪ್ಪ, ಎಂ.ವೈ.ಅಡಗಿನಾಳ್ ಇದ್ದರು.