ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹೊಯ್ಕೈ
ಕ.ಪ್ರ.ವಾರ್ತೆ ತುಮಕೂರು ಜೂ. 22
ಆತ್ಮಾವಲೋಕನ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ತುಮಕೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದಿದೆ.
ತುರುವೇಕೆರೆ ಕಾಂಗ್ರೆಸ್ ಸಮಿತಿಗೆ ಸಂಬಂಧಿಸಿದಂತೆ ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಏರ್ಪಾಟಾಗಿತ್ತು. ಸಭೆಯಲ್ಲಿ ಅಂದಿನ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾದ ಚೌದ್ರಿ ರಂಗಪ್ಪ ಹಾಗೂ ಗೋವಿಂದೇಗೌಡ ಕೂಡ ಹಾಜರಿದ್ದರು. ಚುನಾವಣೆ ಸಮಯದಲ್ಲಿ ತುರುವೇಕೆರೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಗೀತಾ ರಾಜಣ್ಣ ಅವರಿಗೆ ಟಿಕೆಟ್ ನೀಡಿತ್ತು.
ಈ ಸಂದರ್ಭದಲ್ಲಿ ಬಂಡಾಯ ಎದ್ದಿದ್ದ ಚೌದ್ರಿ ರಂಗಪ್ಪ ಹಾಗೂ ಗೋವಿಂದೇಗೌಡ ಅವರು ಕಾಂಗ್ರೆಸ್ ಹೊರತು ಪಡಿಸಿ ಬೇರೆ ಪಕ್ಷಗಳಿಗೆ ಬೆಂಬಲ ಸೂಚಿಸಿದ್ದರು ಎಂಬುದು ಗೀತಾ ರಾಜಣ್ಣ ಪತಿ ರಾಜಣ್ಣ ಅವರ ಆರೋಪವಾಗಿತ್ತು.
ಚಕಮಕಿ: ಈ ಸಂಬಂಧ ತುಮಕೂರಿನ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಗೀತಾರಾಜಣ್ಣ ಅವರ ಪತಿ ರಾಜಣ್ಣ ಕೂಡ ಆಗಮಿಸಿದ್ದರು. ಆಗ ಚೌದ್ರಿ ರಂಗಪ್ಪ ಮತ್ತು ಗೋವಿಂದೇಗೌಡ ಅವರ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು. ಅದು ವಿಕೋಪಕ್ಕೆ ಹೋಗಿ ಗಲಾಟೆಗೆ ಕಾರಣವಾಯಿತು. ಈ ನೂಕಾಟ, ಹೊಡೆದಾಟದಲ್ಲಿ ರಾಜಣ್ಣ ಗಾಯಗೊಂಡಿದ್ದಾರೆ.
ಮೊದಲು ಮಾತಿನ ಚಕಮಕಿ ಆರಂಭವಾಯಿತು. ನಂತರ ಎರಡು ಗುಂಪುಗಳ ನಡುವೆ ಮಾರಾಮಾರಿಯೇ ನಡೆದು ಹೋಯಿತು. ಅದು ಕೂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಎದುರಿನಲ್ಲೇ. ಗಲಾಟೆ ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ. ಗಲಾಟೆ ಜೋರಾಗುತ್ತದೆ ಎಂದು ಊಹಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಅವರು ಕೂಡಲೇ ಸಭೆ ಮುಂದೂಡಿದರು. ಅಷ್ಟರಲ್ಲಾಗಲೇ ಹೊಡೆದಾಟಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿ ಸಾಕ್ಷಿಯಾಯಿತು.
ನಂತರ ಎಲ್ಲರನ್ನು ಕಚೇರಿಯಿಂದ ಹೊರಕ್ಕೆ ಕಳುಹಿಸಲಾಯಿತು. ಅಲ್ಲೂ ಕೂಡ ಬೈದಾಟ, ಹೊಡೆದಾಟ ಹೆಚ್ಚಾಯಿತು. ಗಾಯಗೊಂಡ ರಾಜಣ್ಣ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆಯೇ ಧರಣಿ ಕುಳಿತರು. ಘಟನೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ನೇರಹೊಣೆ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೂಡಲೇ ಹೊಸ ಬಡಾವಣೆ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ಚೆದುರಿಸಿ ಗಲಾಟೆಯನ್ನು ನಿಯಂತ್ರಣಕ್ಕೆ ತಂದರು. ಹೊಸ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.