ನ್ಯಾಯಾಲಯ ಕಟ್ಟಡ ಕಾಮಗಾರಿ ಶೀಘ್ರ ಮುಕ್ತಾಯಕ್ಕೆ ಕ್ರಮ: ಟಿಬಿಜೆ
ತಿಪಟೂರು: ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಹೊಸ ಮಾರ್ಪಾಡುಗಳನ್ನು ತರುವ ಮೂಲಕ ಎಲ್ಲರಿಗೂ ನ್ಯಾಯಯುತ ಹಾಗೂ ಸರಿ ಸಮಾನತೆಯ ನ್ಯಾಯವನ್ನು ದೊರಕಿಸಿಕೊಡುವುದಾಗಿ ಕಾನೂನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಭರವಸೆ ನೀಡಿದರು.
ನಗರದ ವಕೀಲರ ಸಂಘದ ಆವರಣದಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು ತಿಪಟೂರು ನ್ಯಾಯಾಲಯದ ಕಟ್ಟಡದ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿರುವುದನ್ನು ವೀಕ್ಷಿಸಿದ ಅವರು ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತುರ್ತಾಗಿ ಕಾರ್ಯನಿರ್ವಹಿಸಬೇಕಂದು ಸೂಚಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ತಾಲೂಕನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಜಿಲ್ಲಾ ಸಚಿವರು ಸಹಕಾರ ನೀಡಬೇಕೆಂದರಲ್ಲದೆ ತಿಪಟೂರನ್ನು ಜಿಲ್ಲೆಯನ್ನಾಗಿ ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷರಾದ ಎಸ್.ಜಯಣ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸತ್ರ ನ್ಯಾಯಾಧೀಶ ಪ್ರಭಾಕರಶಾಸ್ತ್ರಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶದಾರ ಕೆ.ಬಿ.ಗೀತಾ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ್ ಮತ್ತಿತರರಿದ್ದರು. ಎಸ್.ಜಯಣ್ಣ ಸ್ವಾಗತಿಸಿ,ಕಾರ್ಯದರ್ಶಿ, ಟಿ.ಬಸವರಾಜು ವಂದಿಸಿದರು.