'ಜಡ್ಡುಗಟ್ಟಿದ್ದ ಆಡಳಿತಶಾಹಿಗೆ ಚುರುಕು ಮುಟ್ಟಿಸಿದ ಶಾಸಕ'
ತಿಪಟೂರು: ಚುನಾವಣೆಗೂ ಮುನ್ನ ಜನತೆಗಿತ್ತ ಆಶ್ವಾಸನೆಯನ್ನು ಶಾಸಕ ಕೆ. ಷಡಕ್ಷರಿಯವರು ಈಡೇರಿಸುವಲ್ಲಿ ಮುಂದಾಗಿದ್ದಾರೆಂದು ತಾಲೂಕು ಕಾಂಗ್ರೆಸ್ ವಕ್ತಾರ ಕೆ.ಎಸ್.ಸದಾಶಿವಯ್ಯ ತಿಳಿಸಿದ್ದಾರೆ.
ತಾಲೂಕಿನ ಜನರ ಜೀವನಾಡಿ ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ಒಂದು ಕ್ವಿಂಟಲ್ಗೆ ಕೇಂದ್ರದ ಬೆಂಬಲ ಬೆಲೆ 5500 ರು. ಜೊತೆ ರಾಜ್ಯ ಸರ್ಕಾರದಿಂದ ಒಂದು ಸಾವಿರ ರು. ಪ್ರೋತ್ಸಾಹ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದು, ಈಗ ರೈತರಿಗೆ 6500 ರು. ಕ್ವಿಂಟಲ್ಗೆ ಕೊಬ್ಬರಿಗೆ ಸಿಗಲಿದೆ ಎಂದರು. ಅಲ್ಲದೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಜಿಡ್ಡುಗಟ್ಟಿದ್ದ ಆಡಳಿತಶಾಹಿಗೆ ಚುರುಕು ಮುಟ್ಟಿಸಿದ್ದು, ರೈತರಿಗೆ ಸ್ಪಂದಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕೆ ಶಾಸಕರು ಮೊದಲ ಆದ್ಯತೆ ನೀಡಿದ್ದು, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಯತ್ನಿಸಲಾಗುವುದು. ಶೀಘ್ರದಲ್ಲೇ ನಗರದಲ್ಲಿ ಹಲವು ಕಡೆ ಕಾಯನ್ ಬೂತ್ ಮಾದರಿಯಲ್ಲಿ ಒಂದು ರು.ಗೆ ಒಂದು ಕ್ಯಾನ್ ಶುದ್ಧ ಕುಡಿಯುವ ನೀರು ಪೂರೈಸುವ ಘಟಕವನ್ನು ಸ್ಥಾಪಿಸಲಾಗುವುದು ಎಂದರು. ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ತೆಂಗು ಟೆಕ್ನಾಲಜಿ ಪಾರ್ಕ್ಗೆ ಸೂಕ್ತ ಜಾಗದ ಅನ್ವೇಷಣೆ ನಡೆದಿದೆ. ಜತೆಗೆ ಟೆಕ್ಸ್ಟೈಲ್ಸ್ ಪಾರ್ಕ್ ಸ್ಥಾಪಿಸುವ ಉದ್ದೇಶವಿದೆ. ನಗರದ ಕೆಲವು ಪ್ರಮುಖ ರಸ್ತೆಗಳ ಅಗಲೀಕರಣ, ಎಲ್ಲಾ ರಸ್ತೆಗಳಿಗೂ ಡಾಂಬರೀಕರಣ ಮಾಡಲಾಗುವುದು ಎಂದಿದ್ದಾರೆ.