ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀರಿಗೆ ಹಾಹಾಕಾರವಿದ್ದರೂ ಮದ್ಯ ಕೊಡುತ್ತೇನೆಂಬುದು ಹಾಸ್ಯಾಸ್ಪದ

Rashmi Kasaragodu
Updated On : 24 Jun 2013, 12:35 pm

ಕ.ಪ್ರ.ವಾರ್ತೆ ಟಿ ಅರಸೀಕೆರೆ ಟಿ ಜೂ.23
ರಾಜ್ಯದ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾರ್ಗಳನ್ನು ತೆರೆಯಲು ಅನುಮತಿ ನೀಡಲು ಹೊರಟಿರುವುದು ಹಾಸ್ಯಾಸ್ಪದ ಸಂಗತಿ ಎಂದು ಮಾಜಿ ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ತಾಲೂಕಿನ  ಪುರಾಣ ಪ್ರಸಿದ್ಧ ಶ್ರೀಜೇನುಕಲ್ ಸಿದ್ದೇಶ್ವರ ಸುಕ್ಷೇತ್ರಕ್ಕೆ  ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ತಾಲೂಕು ಕೊಬ್ಬರಿ ವರ್ತಕರ ಸಂಘದ ಅಧ್ಯಕ್ಷ ಗಂಜಿಗೆರೆ ಬಸವರಾಜ್ ಮನೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ವೇಳೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚಿಂತನೆ ಮಾಡದೆ ಅಗ್ಗದ ಮದ್ಯ ವಿತರಣೆ, ಹೊಸ ಬಾರ್ಗಳಿಗೆ ಅನುಮತಿ ಎಂಬಿತ್ಯಾದಿ ಗೊಂದಲದ ಹೇಳಿಕೆ ನೀಡುವ ಮೂಲಕ ರಾಜ್ಯವನ್ನು ಕುಡುಕರ ಸಾಮ್ರಾಜ್ಯವನ್ನಾಗಿ ಪರಿವರ್ತಿಸಲು ಹೊರಟಂತಿದೆ ಎಂದು ಲೇವಡಿ ಮಾಡಿದರು.
ಮದ್ಯ ಪೂರೈಕೆ ಬಗ್ಗೆ ತೋರಿಸುತ್ತಿರುವ ಕಾಳಜಿ ಕುಡಿಯುವ ನೀರು ಪೂರೈಸಲು ಏಕೆ ತೆಗೆದುಕೊಂಡಿಲ್ಲ ಕುಡಿಯುವ ನೀರಿಗೆ ಬದಲಾಗಿ ಮನೆ ಮನೆಗಳಿಗೆ ನಲ್ಲಿಗಳ ಮೂಲಕ ಮದ್ಯವನ್ನೇ ಪೂರೈಸಲಿ ಎಂದು ಚುಚ್ಚಿದರು.
ಕೆಲ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ವಾರದಲ್ಲಿ ಐದಾರು ಘಂಟೆ ಸೇವೆ ಸಲ್ಲಿಸಿರುವವರಿಗೆ ನಿಯಮಾಳಿಗಳ ಹೆಸರಲ್ಲಿ ಈವರೆಗೂ ವೇತನ ವಿತರಿಸುತ್ತಿಲ್ಲವೆಂಬ ಎಂಬ ಅಂಶ ತಮ್ಮ ಗಮನಕ್ಕೆ ಬಂದಿದೆ. ವರ್ಷವಿಡೀ ಬಾಡಿಗೆ ಎತ್ತಿನಂತೆ ದುಡಿಯುವ ಉಪನ್ಯಾಸಕರಿಗೆ ಕನಿಷ್ಠವೇತನವನ್ನು ನೀಡಲು ಸಾಧ್ಯ ಆಗದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕಿಡಿದ ಕೈಗನ್ನಡಿಯಾಗಿದೆ. ಕೂಡಲೇ ವೇತನ ಪಾವತಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದರು.
ಈ ಸಂದರ್ಭ ತಾಲೂಕು ಕೊಬ್ಬರಿ ವರ್ತಕರ ಸಂಘದ ಅಧ್ಯಕ್ಷ ಗಂಜಿಗೆರೆ ಬಸವರಾಜ್, ಬಿಜೆಪಿ. ಮುಖಂಡ ಹಾಗೂ ವಕೀಲ ಎನ್.ಡಿ. ಪ್ರಸಾದ್, ಚಿಕ್ಕಮಗಳೂರು ಎಪಿಎಂಸಿ ಅಧ್ಯಕ್ಷ ಚಿಕ್ಕದೇವನೂರು ರವಿ, ಪ್ರಿಮಿಯರ್ ಮಲ್ಲಿ, ಹಾಲಪ್ಪ, ತಿಮ್ಲಾಪುರ ಜಗದೀಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement