ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನ ದೋಚಿದ್ದ ಸುಲಿಗೆಕೊರರ ಬಂಧನ
ಕುಣಿಗಲ್: ಮೊಬೈಲ್ ಟ್ರಾಕರ್ ತಂತ್ರಜ್ಞಾನದ ಅಧಾರದ ಮೇಲೆ, ಮಾರಾಕಾಸ್ಚ್ರಗಳಿಂದ ಯಾತ್ರಾರ್ಥಿಗಳನ್ನು ಬೆದರಿಸಿ ಚಿನ್ನ, ನಗದು ಹಾಗೂ ಮೊಬೈಲ್ ದೋಚಿದ್ದ ಸುಲಿಗೆಕೊರರನ್ನು ಕುಣಿಗಲ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರಮೇಶ್ ಎಂಬಾತ, ಕಳೆದೆರಡು ತಿಂಗಳ ಹಿಂದೆ ತನ್ನ ಕುಟುಂಬದವರೊಂದಿಗೆ ಧರ್ಮಸ್ಥಳಕ್ಕೆ ಪ್ರವಾಸಕ್ಕಾಗಿ ಹೊರಟಿದ್ದು, ಪಟ್ಟಣದ ಬೈಪಾಸ್ನಲ್ಲಿ ಹೇರೂರು ಗ್ರಾಮದ ತುಸು ದೂರ ಊಟಕ್ಕಾಗಿ ಕಾರು ನಿಲ್ಲಿಸಿ ಕುಟುಂಬದವರೊಂದಿಗೆ ಊಟ ಮಾಡುತ್ತಿದ್ದರು.
ಬೈಕ್ನಲ್ಲಿ ಆಗಮಿಸಿದ ಮೂವರು ಯುವಕರು ಲಾಂಗ್, ಕತ್ತಿಗಳಿಂದ ಬೆದರಿಸಿ 45 ಗ್ರಾಂ ಚಿನ್ನದ ಸರ, ಮೊಬೈಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದು ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಾವುದೇ ಸುಳಿವು ಸಿಗದೆ ಸುಲಿಗೆಕೋರರ ಪ್ರಕರಣ, ಬೈಪಾಸ್ನಲ್ಲಿ ಸಂಚರಿಸುವ ವಾಹನ ಸವಾರರ ಸುರಕ್ಷತೆಯನ್ನೆ ಪ್ರಶ್ನಿಸುವಂತಾಗಿ, ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಳೆದೆರಡು ತಿಂಗಳಿನಿಂದ ಸುಲಿಗೆಕೋರರ ಪತ್ತೆಗೆ ಕುಣಿಗಲ್ ಅಪರಾಧ ವಿಭಾಗದ ಪಿಎಸೈ ಶೇಷಾದ್ರಿ, ಪೇದೆಗಳಾದ ಯಶೋಧರ, ನಯಾಜ್ ಪಾಶ ಇತರರು ಮುಂದಾದಾಗ, ಕಳೆದ ಕೆಲದಿನಗಳಿಂದ ಸುಲಿಗೆಯಾಗಿದ್ದ ಮೊಬೈಲ್ ಪುನಃ ಚಾಲ್ತಿಯಾಗಿತ್ತು.
ಮೊಬೈಲ್ ಟ್ರಾಕರ್ ತಂತ್ರಜ್ಞಾನದ ನೆರವಿನಿಂದ, ಹೆದ್ದಾರಿ ಸುಲಿಗೆಕೋರರ ಪತ್ತೆಗೆ ಮುಂದಾದ ಪೊಲೀಸರು, ಬೆಂಗಳೂರಿನ ವಿಘ್ನೇಶ್ವರ ನಗರದಲ್ಲಿ ಹೊನ್ನಪ್ಪ ಎಂಬಾತನನ್ನು ವಶಕ್ಕೆ ಪಡೆದು, ಇತನ ಮಾಹಿತಿ ಮೇರೆಗೆ ತಾಲೂಕಿನ ಪಡುವಗೆರೆಯ ಚೇತನ್ನನ್ನು ಬಂಧಿಸಿದರು. ಮತ್ತೊರ್ವ ಆರೋಪಿ ಪವನ್ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಗಳಿಬ್ಬರು ಪರಾರಿಯಾಗಿರುವ ಆರೋಪಿಯ ಜೊತೆ ಸೇರಿ ಕೃತ್ಯ ಎಸಗಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಆದುನಿಕ ತಂತ್ರಜ್ಞಾನದ ನೆರವಿನಿಂದ ಯಾವುದೇ ಸುಳಿವಿಲ್ಲದ ಸುಲಿಗೆಕೋರರನ್ನು ಕುಣಿಗಲ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವುದು ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.