ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂರಕವಾಗಿ ಸ್ಪಂದಿಸಿ
ಕ.ಪ್ರ.ವಾರ್ತೆ ಕುಣಿಗಲ್ ಜೂ. 23
ಸಾರ್ವಜನಿಕರಿಗೆ ಸೇರಿದಂತೆ ಗ್ರಾಮಾಂತರ ಪ್ರದೇಶದ ಜನತೆಯ ಎಲ್ಲಾ ರೀತಿಯ ಸಾರಿಗೆ ಸಂಪರ್ಕಕ್ಕೆ ಅನುಕೂಲವಾಗುವಂತ ನೂತನ ರಸ್ತೆ ನಿರ್ಮಾಣಕ್ಕೆ ಗ್ರಾಮಾಂತರ ಪ್ರದೇಶದ ಜನತೆ ಪೂರಕವಾಗಿ ಸ್ಪಂದಿಸಬೇಕೆಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಭಾನುವಾರ, ಕಸಬಾ ಹೋಬಳಿಯ ದೊಡ್ಡೇಗೌಡನಪಾಳ್ಯದಲ್ಲಿ, ಕೇಂದ್ರ ಸರ್ಕಾರದ ಪಿಎಂಜಿಎಸ್ವೈ (ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ) ಯೋಜನೆಯಂತೆ, ಮುಖ್ಯಮಂತ್ರಿಗಳ ಗ್ರಾಮ ಸಡಕ್ ಯೋಜನೆಯಾದ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ 2012-13ನೇ ಸಾಲಿನ 12.30ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿಗಳ ಪ್ರಾರಂಭಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕಾಮಗಾರಿ ಈ ಹಿಂದೇಯೇ ಪ್ರಾರಂಭವಾಗಬೇಕಿತ್ತು. ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ಇದೀಗ ಚಾಲನೆ ನೀಡಲಾಗಿದೆ ಎಂದರು.
ಖಂಡನೀಯ: ಗ್ರಾಮಾಂತರ ಪ್ರದೇಶದಲ್ಲಿ ನೂತನ ರಸ್ತೆ ಕಾಮಗಾರಿ ನಿರ್ಮಾಣ ಸೇರಿದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ಕ್ಷುಲಕ ಕಾರಣಗಳಿಗೆ ಅಡ್ಡಿಯುಂಟು ಮಾಡುವುದು ಖಂಡನೀಯ.
ರಸ್ತೆಗಳು ಅಭಿವೃದ್ಧಿಯಾಗುವುದರಿಂದ ಗ್ರಾಮಾಂತರ ಪ್ರದೇಶದ ಜನತೆ ಪಟ್ಟಣ ಪ್ರದೇಶಕ್ಕೆ ನೇರ ಸಂಪರ್ಕ ಹೊಂದುವು ಮೂಲಕ ಗ್ರಾಮಾಂತರ ಪ್ರದೇಶದ ಆರ್ಥಿಕ ಬೆಳೆವಣಿಗೆಗೆ, ಸುಧಾರಣೆಗೆ ಸಹಕಾರಿಯಾಗಲಿರುವುದನ್ನು ಮನವರಿಕೆ ಮಾಡಿಕೊಂಡು, ರಸ್ತೆ ಅಭಿವೃದ್ಧಿಗೆ ಸಹಕರಿಸುವಂತೆ, ಕಾಮಗಾರಿ ಗುತ್ತಿಗೆ ಪಡೆದವರು ಗುಣಮಟ್ಟದ ಕಾಮಗಾರಿ ನಿರ್ವಹಿಸಿ, ನಿಗದಿತ ಕಾಲವಧಿಯೊಳಗೆ ಶೀಘ್ರವಾಗಿ ಕಾಮಗಾರಿ ಮುಗಿಸಿ ಜನಸಾಮಾನ್ಯರ ಸೇವೆಗೆ ಮುಕ್ತವಾಗಿಸುವಂತೆ ಸೂಚಿಸಿದರು.
ಈ ಯೋಜನೆಯಡಿಯಲ್ಲಿ ದೊಡ್ಡೇಗೌಡನಪಾಳ್ಯದಿಂದ ರಾಜ್ಯಹೆದ್ದಾರಿ 33ಕ್ಕೆ, ಯಾಚಘಟ್ಟ ಗ್ರಾಮದಿಂದ ರಾಜ್ಯಹೆದ್ದಾರಿ 33ಕ್ಕೆ ಸಂಪರ್ಕರಸ್ತೆ, ಮಾಗಡಿ ಗಡಿಯಿಂದ ಗುಡ್ಡದರಂಗನಾಥ ಸ್ವಾಮಿ ದೇವಾಲಯದ ಮೂಲಕ ಹೊಸೂರು ರಸ್ತೆ, ಸೊಬಗನಹಳ್ಳಿ-ಶೆಟ್ಟಿಕೆರೆ-ಬಾಗೇನಹಳ್ಳಿ ರಸ್ತೆ ಅಭಿವೃದ್ಧಿ ಸೇರಿದಂತೆ ತಾಲೂಕಿನಾದ್ಯಂತಸ ವಿವಿಧೆಡೆಯ 30 ಕಿಮಿ ಉದ್ದದ ಗ್ರಾಮಾಂತರ ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗಿದೆ ಎಂದರು.
ಹುತ್ತಿದುರ್ಗ ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ತಹಸೀಲ್ದಾರ್ ಜಗದೀಶ್, ತಾಪಂ ಇಒ ಡಾ.ರಾಮಚಂದ್ರಪ್ಪ, ಸಿಎಂಜಿಎಸ್ವೈ ಜೆಇ ನಾರಾಯಣಸ್ವಾಮಿ, ಮುಖಂಡರಾದ ಮೋದೂರು ಗಂಗಾಧರ, ಕುಲುಮೆಪಾಳ್ಯ ಶಿವಣ್ಣ ಸೇರಿದಂತೆ ಇತರರು ಹಾಜರಿದ್ದರು.