ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಸ್ತೆ ಬಿಟ್ಟು ಪಾರ್ಕ್ ಮಾಡಲು ಮನವಿ

Rashmi Kasaragodu
Updated On : 24 Jun 2013, 12:30 pm

ತುಮಕೂರು: ಕಾರ್ಮಿಕರ ಓಡಾಟಕ್ಕೆ ಇರುವ ರಸ್ತೆಯನ್ನು ಸೇರಿಸಿಕೊಂಡು ಪಾರ್ಕ್ ಅಭಿವೃದ್ಧಿಪಡಿಸಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು ಇದರಿಂದ ಎಲ್ಲರಿಗೂ ತೊಂದರೆಯಾಗಲಿದೆ. ಹಾಗಾಗಿ ನಗರಾಭಿವೃದ್ಧಿ ಪ್ರಾಧಿಕಾರ ಓಡಾಟಕ್ಕೆ ರಸ್ತೆ ಬಿಟ್ಟು ಪಾರ್ಕ್ ಮಾಡಲು ಆ ಭಾಗದ ನಿವಾಸಿಗಳು ಮನವಿ ಮಾಡಿದ್ದಾರೆ.
ಅಂತರಸನಹಳ್ಳಿ ನಂದಗೋಕುಲ ಬಡಾವಣೆಯಲ್ಲಿ ಪಾರ್ಕ್ ಜಾಗದ ಪಕ್ಕದಲ್ಲಿ ಪಶ್ಚಿಮದಕಡೆ ರಸ್ತೆ ಇದೆ. ಈ ರಸ್ತೆಯಲ್ಲಿ ಸುಮಾರು 30-40 ವರ್ಷಗಳಿಂದಲೂ ಇಲ್ಲಿನ ನಾಗರಿಕರು ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಓಡಾಡುತ್ತಾರೆ. ಆದರೆ ನಗರಾಭಿವೃದ್ಧಿ  ಪ್ರಾಧಿಕಾರದವರು ಈ ರಸ್ತೆಯನ್ನು ಸೇರಿಸಿ ಪಾರ್ಕ್ ಮಾಡಲು ಮುಂದಾಗಿದೆ.
ಇದನ್ನು ಬಿಟ್ಟರೆ ಓಡಾಡಲು ಬೇರೆ ದಾರಿ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಟೂಡಾ ಆಯುಕ್ತರಿಗೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಹಿಂದಿನ ಸಚಿವ ಸೊಗಡು ಶಿವಣ್ಣ ಅವರು ನಮ್ಮ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಸ್ಥಳ ಸಮೀಕ್ಷೆ ಮಾಡಿ ಹಾಲಿ ಸಾರ್ವಜನಿಕರು ತಿರುಗಾಡುತ್ತಿರುವ ರಸ್ತೆಯನ್ನು ಹಾಗೆ ರಸ್ತೆಯಾಗಿ ಉಳಿಸಿ ಉಳಿದ ಭಾಗದಲ್ಲಿ ಪಾರ್ಕ್ ಅಭಿವೃದ್ಧಿಪಡಿಸಲು ಆದೇಶ ನೀಡಿದ್ದರು. ತದನಂತರ ಸಂಸದ ಜಿ.ಎಸ್. ಬಸವರಾಜು ಅವರಲ್ಲಿ ಮನವಿ ಸಲ್ಲಿಸಿದಾಗ ಅವರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಹಾಲಿ ರಸ್ತೆಯನ್ನು ರಸ್ತೆಯಾಗಿ ಬಿಟ್ಟು ಉಳಿದ ಜಾಗದಲ್ಲಿ ಪಾರ್ಕ್ ಮಾಡುವಂತೆ ಟೂಡಾ ಆಯುಕ್ತರಿಗೆ ಆದೇಶಿಸಿದ್ದರು.
ಈ ರಸ್ತೆಯಲ್ಲಿ ಈ ಪಾರ್ಕಿಗೆ ಹೊಂದಿಕೊಂಡ ಸರ್ವೆ ನಂಬರ್ 28 ರಲ್ಲಿ ಈಗಾಗಲೇ ಡಿಸಿ ಅವರಿಂದ 1993-94 ನೇ ಸಾಲಿನಲ್ಲಿ ವಸತಿ ಉದ್ದೇಶಕ್ಕಾಗಿ ಪರಿವರ್ತನೆಗೊಂಡ 105 ನಿವೇಶನಗಳಿದ್ದು ಅದರಲ್ಲಿ ಈಗಾಗಲೇ ಹಲವಾರು ಮನೆಗಳನ್ನು ಕಟ್ಟಿ ನಗರಸಭೆಯಲ್ಲಿ ಖಾತೆಗಳಾಗಿದೆ. ಜತೆಗೆ ಮನೆಗಳಲ್ಲಿ ವಾಸವೂ ಆಗಿದ್ದಾರೆ. ಅವರಿಗೆ ಈ ರಸ್ತೆ ಬಿಟ್ಟರೆ ಬೇರೆ ರಸ್ತೆ ಇರುವುದಿಲ್ಲ. ಅದರಂತೆ ಸರ್ವೆ ನಂಬರ್ 20,21,22,29 ರಲ್ಲಿ ಅನಾದಿ ಕಾಲದಿಂದಲೂ ವಾಸವಾಗಿರುವ ಹಲವಾರು ಸ್ಥಳೀಯರಿಗೂ ಹಾಗೂ ಅಂತರಸನಹಳ್ಳಿ 2ನೇ ಹಂತದಲ್ಲಿರುವ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಮಿಕರು ಓಡಾಡುತ್ತಿರುತ್ತಾರೆ. ಈಗಾಗಲೇ ಪಾರ್ಕ್ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ರಸ್ತೆ ಬಿಟ್ಟು ಪಾರ್ಕ್ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಹಾಗೇನಾದರೂ ರಸ್ತೆ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಹೋರಾಟಕ್ಕೆ ಸಿದ್ಧರಿರುವುದಾಗಿ ಆ ಭಾಗದ ನಿವಾಸಿಗಳು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement