ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ
ತಿಪಟೂರು: ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ವರ್ಗದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ನಂತರದ (ಬಾಪೂಜಿ) ಬಾಲಕರ ವಿದ್ಯಾರ್ಥಿನಿಯದಲ್ಲಿರುವ ಖಾಲಿ ಸ್ಥಾನಗಳಿಗೆ ಪ್ರವೇಶಕ್ಕಾಗಿ ಅರ್ಹ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ತಿಪಟೂರು ಅಥವಾ ವಿದ್ಯಾರ್ಥಿ ನಿಲಯದ ವಾರ್ಡನ್ ಅವರಿಂದ ಉಚಿತವಾಗಿ ಪಡೆದು ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಜೂ.25 ಕೊನೆಯ ದಿನಾಂಕವಾಗಿದೆ. ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ, 2 ಸ್ಟಾಂಪ್ ಸೈಜ್ ಭಾವಚಿತ್ರಗಳನ್ನು ಲಗತ್ತಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳು ನಿಲಯದ ನಿಬಂಧನೆಗೆ ಒಳಪಡಬೇಕು. ಹೆಚ್ಚಿನ ವಿವರಗಳಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ರೇಣುಕಾ ಎಲ್ಲಮ್ಮ ಮಹೋತ್ಸವ
ಕುಣಿಗಲ್: ತಾಲೂಕಿನ ಯಡೆಯೂರು ಹೋಬಳಿಯ ಕಂಠನಹಳ್ಳಿ ಗ್ರಾಮದಲ್ಲಿನ ರೇಣುಕಾ ಎಲ್ಲಮ್ಮ ದೇವಾಲಯದ ಆರನೇ ವರ್ಷದ ಮಹೋತ್ಸವ ಕಾರ್ಯಕ್ರಮಗಳನ್ನು ಜಗದ್ಗುರು ಪುರುಷೋತ್ತಮಾನಂದ ಪುರಿ ಸ್ವಾಮಿಜಿಗಳ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದ್ದು, 24ರಂದು ಕಂಕಣಹೋಮ, ನವಗ್ರಹ ಹೋಮ, ವಾಸ್ತುಹೋಮ ಮೃತ್ಯುಂಜಯ ಹೋಮವನ್ನು, 25ನೇ ಮಂಗಳವಾರದಂದು ಮಹಾಚಂಡಿಹೋಮ, ಶಿವಪುರಿ ಸ್ವಾಮೀಜಿಗಳ ಪಾದುಕಾ ಪೂಜೆ, ಮಹಾಚಂಡಿಹೋಮ ಮತ್ತು ಕುಂಭಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಮಂಡಳಿಯ ಮುಖ್ಯಸ್ಥ ಡಿ.ವೈ. ನಾಗೇಂದ್ರಕುಮಾರ್ ತಿಳಿಸಿದ್ದಾರೆ.
ಇಂದು ರೈತರ ಸಮ್ಮೇಳನ
ಹಾಸನ: ರೈತರ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಕೆಪಿಆರ್ಎಸ್ ಹಾಸನ ತಾಲೂಕು ಪ್ರಥಮ ಸಮ್ಮೇಳನವನ್ನು ಜೂ.24ರಂದು ಬೆಳಗ್ಗೆ 10ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ಕುಮಾರ್ ತಿಳಿಸಿದ್ದಾರೆ. ರೈತರು ದೇಶದ ಬೆನ್ನೆಲುಬು, ಅನ್ನದಾತ ಎನ್ನುತ್ತಿರುವಾಗಲೇ ಅದೇ ಅನ್ನದಾತ ರೈತ ಕೃಷಿ ಬಿಕ್ಕಟ್ಟಿನಿಂದ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಒಂದೆಡೆ ಪ್ರಕೃತಿ ನಿರಂತರವಾಗಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದರೆ, ಮತ್ತೊದೆಡೆ ಸಂಕಷ್ಟದಲ್ಲಿರುವ ರೈತರನ್ನು ಕಾಪಾಡಬೇಕಾದ ಆಳುವ ಸರ್ಕಾರಗಳು ನಿರಂತರವಾಗಿ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದರು.