ಅಭಿವೃದ್ಧಿಗೆ ನಿರಂತರ ಹೋರಾಟ
ಪಾವಗಡ: ಸಮಗ್ರ ನೀರಾವರಿ ಅನುಷ್ಠಾನ, ಗುಡಿಸಲು ರಹಿತ ಯೋಜನೆ ಜಾರಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರ ಹೋರಾಟ ಮಾಡುವುದಾಗಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು. ಅವರು ಸೋಮವಾರ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ತಾ. ಸಮಗ್ರ ನೀರಾವರಿ ಅನುಷ್ಠಾನಕ್ಕೆ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿಸಲು ಕೆರೆಗಳಿಗೆ ನೀರು ಹರಿಸುವ ಹಿನ್ನೆಲೆಯಲ್ಲಿ ಹೇಮಾವತಿ, ನೇತ್ರಾ, ಎತ್ತಿನಹೊಳೆ ಸೇರಿದಂತೆ ಯಾವುದಾದರೂ ನದಿ ಮೂಲದ ನೀರು ಹರಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಅಲ್ಲದೇ ಈಗಾಗಲೇ ಅನುಷ್ಠಾನವಾಗಿ ಉಳಿಕೆ ಮನೆಗಳ ನಿರ್ಮಾಣಕ್ಕೆ ಗುಡಿಸಲು ರಹಿತ ಯೋಜನೆ ಜಾರಿಗೆ ಬದ್ಧರಾಗಿರುವುದಾಗಿ ತಿಳಿಸಿ, ಪಡಿತರ ವ್ಯವಸ್ಥೆ ಸೇರಿದಂತೆ ರದ್ದಾದ ನಿರ್ಗತಿಕರ ಮಾಸಾಶನವನ್ನು ಪುನರ್ ಪರಿಶೀಲಿಸುವ ಮೂಲಕ ಮಾಸಾಶನ ಮಂಜೂರಾತಿಗೆ ಹೋರಾಟ ಮಾಡುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಹಕಾರವಿದೆ ಎಂದರು.