ತುಮಕೂರು ಜಿಪಂ ಸಿಇಒಗೆ ಜಾಮೀನು ರಹಿತ ವಾರಂಟ್
ಬೆಂಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿದ ನೋಟಿಸ್ಗೆ ಪ್ರತಿಕ್ರಿಯಿಸದ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹೈಕೋರ್ಟ್ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ. ತುಮಕೂರಿನ ಶಿರಾ ತಾಲೂಕಿನ ಬುಕ್ಕಾಪಟ್ಟಣದ ನಿವಾಸಿ ಎಸ್.ಜೆ. ಲಿಂಗೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಮೋಹನದಾಸ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಬುಕ್ಕಾ ಪಟ್ಟಣದಲ್ಲಿನ ಸರ್ಕಾರಿ ಪ್ರೌಢಶಾಲೆ ನಿರ್ಮಿಸುವ ಕುರಿತು ಸರ್ಕಾರದಿಂದ ಪ್ರಸ್ತಾವನೆ ಬಂದಾಗ ತಮ್ಮ ಜಮೀನು ನೀಡುವುದಾಗಿ ಲಿಂಗೇಗೌಡ ಮುಂದೆ ಬಂದಿದ್ದರು. ಈ ನಡುವೆ, ಲಿಂಗಪ್ಪ ಎಂಬುವರು ಕೂಡ ತಮ್ಮ ಜಮೀನು ನೀಡ ಬಯಸಿದ್ದರು. ಜಿಲ್ಲಾ ಪಂಚಾಯತ್ ಆಡಳಿತ ಲಿಂಗಪ್ಪ ಅವರ ಜಮೀನು ಪಡೆಯಲು ಅನುಮತಿ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಲಿಂಗೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಪೀಠ, ಈ ಸಂಬಂಧ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಹಲವು ನೋಟಿಸ್ಗಳಿಗೆ ಕೂಡ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ನ್ಯಾಯಪೀಠ ಅಧಿಕಾರಿ ವಿರುದ್ಧ ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ.