ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೆ.ಎಸ್. ಸತ್ಯಮೂರ್ತಿ
ಕ.ಪ್ರ.ವಾರ್ತೆ ತುಮಕೂರು ಜೂ. 24
ಒಂದು ತಿಂಗಳು 4 ದಿನಗಳಿಂದ ಖಾಲಿ ಬಿದ್ದಿದ್ದ ತುಮಕೂರು ಜಿಲ್ಲಾಧಿಕಾರಿ ಹುದ್ದೆ ಕೊನೆಗೂ ಭರ್ತಿಯಾಗಿದೆ. ರಾಜ್ಯ ಕಬ್ಬು ಅಭಿವೃದ್ಧಿ ಮಂಡಳಿ ಆಯುಕ್ತರಾಗಿದ್ದ ಕೆ.ಎಸ್. ಸತ್ಯಮೂರ್ತಿ ಸೋಮವಾರ ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಸತ್ಯಮೂರ್ತಿ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಜಿಲ್ಲೆಗೆ ಜಿಲ್ಲಾಧಿಕಾರಿಗಳೇ ಇಲ್ಲದೆ ಒಂದು ತಿಂಗಳು 4 ದಿನ ಕಳೆದಿತ್ತು. ಸರ್ಕಾರ ಶನಿವಾರ ಕೆ.ಎಸ್. ಸತ್ಯಮೂರ್ತಿ ಅವರನ್ನು ವರ್ಗಾವಣೆ ಮಾಡಿದ್ದು, ಅವರು ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸರ್ಕಾರ ತುಮಕೂರಿಗೆ ಜಿಲ್ಲಾಧಿಕಾರಿಗಳನ್ನು ನೇಮಿಸದೇ ಇರುವುದರಿಂದ ಜಿಲ್ಲಾ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದನ್ನು ಸ್ಮರಿಸಬಹುದಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಆಗಮಿಸಿದ್ದ ಅನುರಾಗ್ ತಿವಾರಿ ಅವರು ಚುನಾವಣೆ ಮುಗಿದ ಕೂಡಲೇ ಮಾತೃ ಇಲಾಖೆ ಹಣಕಾಸು ಉಪಕಾರ್ಯದರ್ಶಿಯಾಗಿ ದಿಢೀರ್ ವರ್ಗಾವಣೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿ ಹುದ್ದೆ ಖಾಲಿ ಬಿದ್ದಿತ್ತು. ನಂತರ ಡಿಸಿ ನೇಮಿಸುವ ಗೋಜಿಗೆ ಸರ್ಕಾರ ಹೋಗಿರಲಲ್ಲ.
ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ತುಮಕೂರಿಗೆ ನಿಯೋಜಿತಗೊಂಡಿದ್ದಾರೆ. ಇನ್ನೇನು ಅಧಿಕಾರ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೆ ಅದಾಗಲಿಲ್ಲ.
ಮರು ಮೌಲ್ಯಮಾಪನ: ಹೆಚ್ಚಿದ ಅಂಕ
ಹಾಸನ: 2012-13ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ (ಪಿಸಿಎಂಬಿ) ಪರೀಕ್ಷೆಯಲ್ಲಿ ನಗರದ ಸುಜಲಾ ಕಾಲೇಜಿನ ಸ್ವಾತಿ ಡಿ.ಎನ್. ಒಟ್ಟು 553 ಅಂಕ ಪಡೆದಿದ್ದು, ಕನ್ನಡ ಹಾಗೂ ಇಂಗ್ಲಿಷ್ ಭಾಷಾ ವಿಷಯಗಳ ಮರು ಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಮರು ಮೌಲ್ಯಮಾಪನ ನಂತರ ಒಟ್ಟು 26 ಅಂಕಗಳು ಹೆಚ್ಚುವರಿಯಾಗಿ ಬಂದಿದೆ.