ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

1ಕ್ಕೆ ಕೆಜಿ ಅಕ್ಕಿ, ಅಗ್ಗದ ಆಲ್ಕೋಹಾಲು ಬಡವರ ಹಾದಿ ತಪ್ಪಿಸಲಿದೆ: ಶ್ರೀಗಳು

Vishwanath S
Updated On : 30 Jun 2013, 12:13 pm

ಕ.ಪ್ರ.ವಾರ್ತೆ ,  ಕುಣಿಗಲ್ ,  ಜೂ. 29
ಬೆಳಗ್ಗೆ ಮಕ್ಕಳಿಗೆ ಅಂಗನವಾಡಿಯಲ್ಲಿ ಹಾಲು, ರಾತ್ರಿವೇಳೆ ಅಪ್ಪನಿಗೆ ಅಗ್ಗದ ದರದಲ್ಲಿ ಆಲ್ಕೋಹಾಲು, ಮಧ್ಯಾಹ್ನ ಅಮ್ಮನಿಗೆ 1ಕ್ಕೆ 1 ಕೆಜಿ ಅಕ್ಕಿ ನೀಡುವ ಮೂಲಕ ಸರ್ಕಾರ ಬಡಜನತೆಯನ್ನು ಮತ್ತಷ್ಟು ಬಡವರನ್ನಾಗಿಸುತ್ತಿದೆ. ಸ್ವಾವಲಂಬನೆಯ ಹಾದಿ ತಪ್ಪಿಸುವಂತ ಗಂಭೀರ ತಪ್ಪು ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂತಹ ಯೋಜನೆ ಮಾರಕ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಡಾ.ವೀರೇಶಾನಂದ ಸರಸ್ವತಿ ಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆ ರಂಗಮಂದಿರದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಶಿಕ್ಷಕರ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಹುಶಃ  ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಆದೇಶದ ಪ್ರಜೆಯನ್ನು ಈ ಮಟ್ಟಕ್ಕೆ ಕೆಳಗಿಳಿಸುವಂತ ಕಾರ್ಯನಡೆದಿಲ್ಲ. ದೇಶದ ಪ್ರಜೆಗಳನ್ನು ಸದೃಢ, ಸ್ವಾವಲಂಬಿಗಳನ್ನಾಗಿ ರೂಪಿಸುವಂತ ಉತ್ತಮ ಯೋಜನೆಗಳು ಅನುಷ್ಠಾನವಾಗುವ ಅಗತ್ಯತೆ ಹೆಚ್ಚಿದೆ ಎಂದರು.
ಪ್ರಜ್ಞಾವಂತ, ಸಾಕ್ಷರ ಸಮಾಜ ನಿರ್ಮಾಣದ ಭದ್ರ ಬುನಾದಿಯೇ ಶಿಕ್ಷಕ ವರ್ಗವಾಗಿದೆ. ಶಿಕ್ಷಕರು ತಾವು ಬೋಧಿಸುವ ಶಿಕ್ಷಕ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಬೀಗಬೇಕೆ ಹೊರತು, ಇತರೆ ಸರ್ಕಾರಿ ವೃತ್ತಿಯಲ್ಲಿರುವವರನ್ನು ಕಂಡು ತಮ್ಮನ್ನು ತಾವು ಅವಮಾನಿಸಿಕೊಳ್ಳುವಂತ ಮಟ್ಟಕ್ಕೆ ಬಾಗಬಾರದು. ಯಾರೂ ಸದಾ ಕಲಿಕೆಯ ಹಂಬಲದಲ್ಲಿ ತುಡಿಯುವ ವ್ಯಕ್ತಿಯೋ, ಅವರೇ ನಿಜವಾಗಿ ಶಿಕ್ಷಕರಾಗುವ ಅರ್ಹತೆ ಹೊಂದಿರುತ್ತಾ, ಶಿಕ್ಷಕರು ಸದಾ ಹೊಸ, ಹೊಸ ಬೋಧನಾ ವಿಷಯಗಳ ಬಗ್ಗೆ ಅಧ್ಯಯನಶೀಲರಾಗಬೇಕು. ಕಲಿತು ಮುಂದಿನ ಪೀಳಿಗೆಯ ಇಂದಿನ ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಬೋಧಿಸಿ, ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಬೇಕಿದೆ. ಎಲ್ಲಾ ವಿದ್ಯಾರ್ಥಿಗಳ ಬದುಕಿಗೆ ಭದ್ರ ಬುನಾದಿಯನ್ನು ಹಾಕಿ ಅವರ ಬದುಕು ಹಸನುಗೊಳಿಸುವ ಮಹತ್ಕಾರ್ಯ ಶಿಕ್ಷಕ ಸಮುದಾಯಕ್ಕಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವುದು ಸ್ವಾಗತಾರ್ಹ. ಶಿಕ್ಷಕರು ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮ ನಿರ್ಣಾಯಕ ಪಾತ್ರ ಪರಿಣಾಮಕಾರಿಯಾಗಿ ನಿರ್ವಹಿಸುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಬೇಕೆಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಕೆ.ಎಚ್. ಗೋಪಾಲಕೃಷ್ಣೇಗೌಡ, ದೇಶದ ಸಾಂಸ್ಕೃತಿಕ, ಸಂಸ್ಕಾರಯುತ ಮೌಲ್ಯಗಳನ್ನು ಇಂದಿನ ಬಹುತೇಕ ಯುವ ಜನಾಂಗ ಪಾಲಿಸದೆ, ತಿಲಾಂಜಲಿ ನೀಡುತ್ತಿರುವುದರಿಂದ ಹಲವು ಸಮಸ್ಯೆಗಳು ಎದುರಾಗಿವೆ. ದೇಶದ ಭವಿಷ್ಯವಾದ ಯುವಜನತೆ ಸನ್ಮಾರ್ಗದಲ್ಲಿ ನಡೆಯಲು ಸ್ವಾಮಿ ವಿವೇಕಾನಂದರ ಹಲವು ಉಪದೇಶಗಳು ಸಹಕಾರಿಯಾಗಿವೆ. ಅವು ಹೆಚ್ಚು ಹೆಚ್ಚು ಯುವಜನತೆಯನ್ನು ತಲುಪುವಂತಾಗಬೇಕಿದೆ.  ಈ ನಿಟ್ಟಿನಲ್ಲಿ ಶಿಕ್ಷಕರು ಪರಿಣಾಮಕಾರಿ ಪಾತ್ರ ನಿರ್ವಹಿಸಬೇಕೆಂದರು. ಅಲಸೂರು ರಾಮಕೃಷ್ಣ ಮಠದ ತ್ಯಾಗೀಶ್ವರ ನಂದಜೀ ಮಹರಾಜ್, ಜಿಪಂ ಸದಸ್ಯ ಡಾ. ಬಿ.ಎನ್.ರವಿ, ಬಿಇಒ ವಿ.ಜಿ. ಲೋಕೇಶ್, ಪ್ರಮುಖರಾದ ಎ.ಆರ್. ರಂಗಸ್ವಾಮಿ, ದಿನೇಶ್, ಸುರೇಶ್, ಸುಷ್ಮಾ ಸುರೇಶ್, ಗಂಗಮ್ಮ, ರಾಮಲಿಗೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುನ್ನ ಪ್ರವಾಸಿ ಮಂದಿರದಿಂದ ಬಯಲು ರಂಗಮಂದಿರದವರೆಗೂ ಸಾವಿರಾರು ಶಾಲಾ ಮಕ್ಕಳ ನೇತೃತ್ವದಲ್ಲಿ ಭವ್ಯ ರಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement