ದಲಿತರು, ಸವರ್ಣೀಯರ ವಾಗ್ವಾದ: ಉದ್ವಿಗ್ನ
ಕ.ಪ್ರ.ವಾರ್ತೆ, ಕುಣಿಗಲ್, ಜೂ.29
ಅಂಬೇಡ್ಕರ್ ಭವನ ನಿವೇಶನ ವಿಷಯದ ಕ್ಷುಲ್ಲಕ ಕಾರಣಕ್ಕೆ ತಾಲೂಕಿನ ಕಲ್ಲನಾಯಕನಹಳ್ಳಿಯಲ್ಲಿ ದಲಿತರು, ಸವರ್ಣೀಯರ ನಡುವೆ ವಾಗ್ವಾದ ನಡೆದು ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿ, ತುಮಕೂರು ಉಪವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಡೆದಿದೆ.
ಹುತ್ರಿದುರ್ಗ ಹೋಬಳಿಯ ಕಲ್ಲನಾಯಕನಹಳ್ಳಿ ಗ್ರಾಮದ ಸರ್ವೇ ನಂ.78 ರಲ್ಲಿ 5.30 ಎಕರೆ ಸರ್ಕಾರಿ ಜಮೀನಿನಲ್ಲಿ ಗ್ರಾಮದ ಹೃದಯ ಭಾಗದಲ್ಲಿ ಗೋಕಟ್ಟೆಯಿದ್ದು, ಸದರಿ ಕಟ್ಟೆಯನ್ನು ಕಳೆದಕೆಲ ವರ್ಷದ ಹಿಂದೆ ಹಿಂದಿನ ಕಾಂಗ್ರೆಸ್ ಶಾಸಕರ ಅನುದಾನ ದಡಿಯಲ್ಲಿ 3 ಲಕ್ಷ ವ್ಯಯಿಸಿ ಮುಚ್ಚಲಾಗಿತ್ತು. ಸಮತಟ್ಟಾದ ಹಿನ್ನೆಲೆಯಲ್ಲಿ, ಸದರಿ ಪ್ರದೇಶದ ಪೈಕಿ 100 ್ಗ100 ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು, ಸ್ಥಳೀಯ ಕೆಲ ದಲಿತ ಮುಖಂಡರು ವಿವಿಧ ಸಂಘಟನೆಗಳ ಮೂಲಕ ಅರ್ಜಿ ಸಲ್ಲಿಸಿ, ಜಾಗ ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ನೀಡಲು ವಿವಿಧ ಹಂತದ ಪ್ರಕ್ರಿಯೆ ಜಾರಿಯಲ್ಲಿದೆ.
ಈ ಮಧ್ಯೆ ಶುಕ್ರವಾರ ರಾತ್ರಿ ಜಿಪಂ ಮಾಜಿ ಸದಸ್ಯ ಶಿವಣ್ಣ, ಗ್ರಾಮದ ಮಧ್ಯ ಭಾಗದಲ್ಲಿ ಮುಚ್ಚಲಾಗಿರುವ ಕಟ್ಟೆ ಪುನಃ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯತೆಗಾಗಿ, ಗ್ರಾಮಸ್ಥರೊಂದಿಗೆ ಸೇರಿ, ತೋಡಲು ಮುಂದಾದದರು. ಸ್ಥಳೀಯ ದಲಿತ ಮುಖಂಡರಾದ ರಂಗಸ್ವಾಮಿ, ಪ್ರಹ್ಲಾದ್, ಸ್ವಾಮಿ ಇತರರು ಶುಕ್ರವಾರ ರಾತ್ರಿ ಸದರಿ ನಿವೇಶನ ಅಂಬೇಡ್ಕರ್ ಭವನಕ್ಕೆ ಮೀಸಲಾಗಿದ್ದು, ಪುನಃ ಕಟ್ಟೆಗೆ ಅಗೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇತರರೊಂದಿಗೆ ವಾಗ್ವಾದಕ್ಕೆ ಇಳಿದರು.
ದಲಿತರು ಗ್ರಾಮದ ಮಧ್ಯ ಭಾಗದಲ್ಲಿನ ಕಟ್ಟೆ ವಿಷಯಕ್ಕೆ ತಗಾದೆ ತೆಗೆಯುವುದನ್ನು ವಿರೋಧಿಸಿದ ಮತ್ತಷ್ಟು ಗ್ರಾಮಸ್ಥರು, ದಲಿತರ ತಗಾದೆಗೆ ವಿರೋಧಿಸಿ, ವಾಗ್ವಾದಕ್ಕೆ ಇಳಿದರು. ಈ ಮದ್ಯೆ ಎರಡೂ ಬಣಗಳ ಗುಂಪಿನ ನಡುವೆ ವಾಗ್ವಾದ ತಾರಕಕ್ಕೇರಿತು. ಈ ಹಂತದಲ್ಲಿ ಕೆಲ ದಲಿತರು ಆತ್ಮಾಹುತಿಗೆ ಮುಂದಾಗಿ ಸೀಮೆಎಣ್ಣೆ ಬಾಟಲಿಗಳನ್ನು ಹಿಡಿದು ಬೆದರಿಸಲು ಮುಂದಾದರು.
ಇದಕ್ಕೆ ಸವರ್ಣೀಯರ ಗುಂಪು ಆಕ್ಷೇಪಿಸಿ, ತಳ್ಳಾಟ ನಡೆಸಿದಾಗ, ಸೀಮೆಎಣ್ಣೆ ಎಲ್ಲರ ಮೇಲೂ ಪರಸ್ಪರ ಎರಚಾಡಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ವಿಷಯ ತಿಳಿದ ಪಿಎಸೈ ಗುರುಪ್ರಸಾದ್ ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗುಂಪು ಚದುರಿಸಿ ಪರಿಸ್ಥಿತಿ ಹತೋಟಿ ತಂದರು. ತಡರಾತ್ರಿ ಡಿವೈಎಸ್ಪಿ ಉಮಾರಾಣಿ, ಸಿಪಿಐ ಧಮೇಂದ್ರ ಭೇಟಿ ನೀಡಿ, ಕಂದಾಯ ಅಧಿಕಾರಿಗಳು ನಿರ್ಧಾರ ಕೈಗೊಳ್ಳುವವರೆಗೂ, ಶಾಂತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿ, ಬಿಗಿ ಬಂದೋಬಸ್ತ್ ಎರ್ಪಡಿಸಿದರು.
ಬೆಳಗ್ಗೆ 11 ಗಂಟೆಗೆ ತುಮಕೂರು ಉಪವಿಭಾಗಾಧಿಕಾರಿ ನಕುಲ್, ಎಸ್ಪಿ ರಮಣಗುಪ್ತಾ, ಸ್ಥಳಕ್ಕೆ ಆಗಮಿಸಿದಾಗ ಪರಸ್ಪರ ಆರೋಪ, ಪ್ರತ್ಯಾರೋಪ ನಡೆದು, ಗ್ರಾಮದ ಮಧ್ಯ ಭಾಗದಲ್ಲಿ ದಲಿತರು ಬಂದು ಕೂರುತ್ತಾರೆ ಎಂದು ಬೇಕೆಂದೆ ಸವರ್ಣೀಯರು ನಮ್ಮ ಮೇಲೆ ಸೀಮೆಎಣ್ಣೆ ಸುರಿದು, ನಮ್ಮನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಗ್ರಾಮದಲ್ಲಿ ಭೀತಿ ವಾತಾವರಣ ಉಂಟಾಗಿದೆ. ನಮಗೆ ರಕ್ಷಣೆ ಕಲ್ಪಿಸುವಂತೆ ಆಗ್ರಹಿಸಿ ದಲಿತ ಮುಖಂಡರಾದ ರಂಗಸ್ವಾಮಿ, ಸ್ವಾಮಿ ಇತರರು ದೂರಿದರು. ಮುಖಂಡರಾದ ಶಿವಶಂಕರ್, ದಲಿತ ನಾರಾಯಣ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ದಲಿತರು ಸಂವಿಧಾನಬದ್ಧವಾಗಿ ನೀಡಲಾಗಿರುವ ರಕ್ಷಣಾ ಕಾನೂನನ್ನು ಬೇಕೆಂದೇ ದುರುಪಯೋಗಪಡಿಸಿಕೊಂಡು, ಸವರ್ಣೀಯರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ರಾತ್ರಿ ಸೀಮೆಎಣ್ಣೆಯನ್ನು ಬಾಟಲಿಗಳಲ್ಲಿ ಹಾಕಿ, ನಮ್ಮ ಮೇಲೆ ಎಸೆದು ವಿನಾಕಾರಣ ಗೊಂದಲ ಸೃಷ್ಟಿಸುತ್ತಾ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಗ್ರಾಮದ ಮಧ್ಯ ಭಾಗದಲ್ಲಿದ್ದ ಗೋಕಟ್ಟೆಯನ್ನು ಪುನಃ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದೇವೆ. ಅವರು ಅಂಬೇಡ್ಕರ್ ಭವನ ಬೇರೆಡೆ ಕಟ್ಟಿಕೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ ಎಂದು ಜಿಪಂ ಮಾಜಿಸದಸ್ಯ ಶಿವಣ್ಣ, ಮಂಜ ಇತರರು ತಿಳಿಸಿದರು.
ವಾದ ವಿವಾದ ಆಲಿಸಿದ ಎಸ್ಪಿ, ಎಸಿ, ಸರ್ಕಾರದ ವಶದಲ್ಲಿರುವ ಜಮೀನಾದ ಕಟ್ಟೆಗೆ ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಕಾಮಗಾರಿ ನಡೆಸಿದ್ದು, ಕಾನೂನು ಬಾಹಿರವಾಗಿದೆ. ಕೂಡಲೇ ಕಟ್ಟೆ ಪ್ರದೇಶದಲ್ಲಿ ಕಾಮಗಾರಿ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ, ಗ್ರಾಮದಲ್ಲಿನ ಸಮಸ್ಯೆ ಎರಡೂ ಬಣದವರೂ ಕೂತು ಸೌಹಾರ್ದವಾಗಿ ಬಗೆಹರಿಸಿಕೊಳ್ಳುವಂತೆ, ಉಲ್ಲಂಘಿಸಿ ಬೇರೆ ತರಹ ನಡೆದುಕೊಂಡರೆ ಮುಲಾಜಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿ, ಜಾಗದ ಮಾಲಿಕತ್ವ ಬಗೆಹರಿಯುವವರೆಗೂ ವಿವಾದಿತ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಯಥಾಸ್ಥಿತಿ ಕಾಪಾಡುವಂತೆ ಎಸಿ ಸೂಚನೆ ನೀಡಿದರು.
ಎಸ್ಪಿ ರಮಣಗುಪ್ತಾ, ದಲಿತರು ಹೆದರಬೇಕಾಗಿಲ್ಲ ಸವರ್ಣೀಯರಿಂದ ಯಾವುದೇ ತೊಂದರೆಯಾಗದಂತೆ ಸೂಕ್ತ ರಕ್ಷಣೆ ಕಲ್ಪಿಸಲಾಗುವುದು ಎಂದರು. ಗ್ರಾಮದಲ್ಲಿ ಪರಿಸ್ಥಿತಿ ಮೇಲ್ನೋಟಕ್ಕೆ ಶಾಂತವಾಗಿದ್ದರೂ,ಬೂದಿ ಮುಚ್ಚಿದ ಕೆಂಡದಂತಿದೆ.
ಗಲಭೆಗೆ ಹುಚ್ಚಯ್ಯ ಖಂಡನೆ
ಕುಣಿಗಲ್: ಕಲ್ಲನಾಯಕನಹಳ್ಳಿ ಗ್ರಾಮದಲ್ಲಿ ಸವರ್ಣಿಯರು, ದಲಿತರು ನಡುವೆ ನಡೆದಿರುವ ಅಹಿತಕರ ಘಟನೆಯನ್ನು ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದರಿ ಗ್ರಾಮದಲ್ಲಿ ನಿರ್ಮಾಣವಾದುವ ಅಂಬೇಡ್ಕರ್ ಭವನ ಕೇವಲ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ ಎಲ್ಲಾ ವರ್ಗದ ಜನತೆಯ ಉಪಯೋಗಕ್ಕೆ ಬರುತ್ತದೆ. ಅಲ್ಲದೆ, ಸದರಿ ಭವನ ಗ್ರಾಪಂ ನಿರ್ವಹಣೆ ಮಾಡಿಕೊಂಡು ಹೋಗುವುದರಿಂದ ಅದು ಗ್ರಾಮ ಸ್ವತ್ತಾಗುತ್ತದೆ, ಗ್ರಾಮದಲ್ಲಿ ವಿನಾಕಾರಣ ಕ್ಷುಲ್ಲಕ ರಾಜಕಾರಣದ ಪ್ರಭಾವಕ್ಕೆ ಒಳಗಾಗಿ ಎರಡು ವರ್ಗಗಳ ನಡುವೆ ಬೇಧಭಾವ ಮೂಡಿಸುವಂತಹ ಕಿಡಿಗೇಡಿಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಗ್ರಾಮದ ಸಮಸ್ಯೆಯನ್ನು ಎರಡೂ ಕಡೆಯವರೂ ಸೌಹಾರ್ದಯುತವಾಗಿ ಕೂತು ಬಗೆಹರಿಸಿಕೊಳ್ಳುವ ಮೂಲಕ ಶಾಂತವಾತವರಣ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದಿದ್ದಾರೆ.
13 ಮಂದಿ ಸವರ್ಣೀಯರ ವಿರುದ್ಧ ದೂರು
ಕುಣಿಗಲ್: ಕಲ್ಲನಾಯಕನಹಳ್ಳಿ ಗ್ರಾಮದ ಅಂಬೇಡ್ಕರ್ ನಿವೇಶನ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ದಲಿತರು ಹಾಗೂ ಸವರ್ಣೀಯರ ನಡುವಿನ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಲಿತರಾದ ರಂಗಸ್ವಾಮಿ ನೀಡಿರುವ ದೂರಿನ ಮೇರೆಗೆ, ಜಿಪಂ ಮಾಜಿ ಸದಸ್ಯ ಶಿವಣ್ಣ ಇತರೆ 13 ಮಂದಿ ಸವರ್ಣೀಯರ ಮೇಲೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.