ಪ್ರಗತಿಯತ್ತ ಕಸಬಾ ವ್ಯವಸಾಯ ಸಹಕಾರ ಸಂಘ: ಸುಬ್ಬರಾಯಪ್ಪ
ಪಾವಗಡ: ತಾಲೂಕು ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಯ ಪರಿಶ್ರಮದ ಹಿನ್ನೆಲೆಯಲ್ಲಿ ಸಂಘ ಅರ್ಥಿಕವಾಗಿ ಸದೃಢವಾಗಿದೆ ಎಂದು ಹಿರಿಯ ಮುಖಂಡ ಮಾಜಿ ಡಿಸಿಸಿ, ಬ್ಯಾಂಕ್ ನಿರ್ದೇಶಕ ಪಿ.ಎಚ್.ಸುಬ್ಬರಾಯಪ್ಪ ಸ್ವಷ್ಟಪಡಿಸಿದ್ದಾರೆ. ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಶನಿವಾರ ಏರ್ಪಾಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘದ ಕಾರ್ಯದರ್ಶಿ ನಾರಾಯಣಮೂರ್ತಿ ಎಂಬವರ ಮೇಲೆ ಮುಖಂಡ ಗುಂಡ್ಲಹಳ್ಲಿ ರಾಮಾಂಜಿನಪ್ಪ ಇಲ್ಲಸಲ್ಲದ ಆರೋಪಗಳೊಂದಿಗೆ ಸಂಘದ ಕಾರ್ಯದರ್ಶಿ 6 ವರ್ಷಗಳ ಬೆಳೆ ವಿಮೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದು, ಅವರ ಆರೋಪದಲ್ಲಿ ಹುರುಳಿದೆ ಎಂದು ಅವರು ಆರೋಪಿಸಿದರು. ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಾನು ಕೂಡ ಸಾಲಗಾರ. 2009- 10ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಹಾಗೂ 2011-12 ರಲ್ಲಿ ಗ್ರಾಮ ಪಂಚಾಯಿತಿವಾರು ಬೆಳೆವಿಮೆ ಸೇರಿದಂತೆ ಇದುವರೆವಿಗೂ ಸಂಘಕ್ಕೆ ಕೇವಲ 2 ವರ್ಷಗಳ ಬೆಳೆ ವಿಮೆ ಮಾತ್ರ ಬಂದಿದೆ. ಬಿಡುಗಡೆಯಾದ ಬೆಳೆ ವಿಮೆಯನ್ನು ಹಣವನ್ನು ಸಂಬಂಧಿಸಿದ ಸಾಲಗಾರರ ಬೆಳೆ ಸಾಲಕ್ಕೆ ಜಮಾ ಮಾಡಿದ್ದಾರೆ ಎಂದರು. ಸಂಘದ ಕಾರ್ಯದರ್ಶಿ ನಾರಾಯಣಮೂರ್ತಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಬಂದಾಗಿನಿಂದಲೂ ಸಂಘವು ಲಾಭದಲ್ಲಿದ್ದು, ಸಂಘ 2012- 13ನೇ ಸಾಲಿಗೆ 3,48,532 ಲಾಭದಲ್ಲಿದೆ ಎಂದರು. ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ನಾರಾಯಣಮೂರ್ತಿ ಇದ್ದರು. ಕಾರ್ಯದರ್ಶಿ ನಾರಾಯಣಮೂರ್ತಿ ಸಂಘದ ಏಳಿಗೆಗೆ ದುಡಿಯುತ್ತಿದ್ದು, ಸಂಘದ ಅಭಿವೃದ್ಧಿಗೆ ದುಡಿಯುವವರ ವಿರುದ್ಧ ಆರೋಪಗಳು ಮಾಡುವುದು ಸರಿಯಲ್ಲ ಎಂದು ವಿವರಿಸಿದರು.
ಟ್ಯಾಕ್ಸಿ ನಿಲ್ದಾಣ ಇಲ್ಲದಿದ್ದರೂ ಸುಂಕ ವಸೂಲಿ: ಆಕ್ರೋಶ
ತಿಪಟೂರು: ನಗರದ ನಗರಸಭಾ ವ್ಯಾಪ್ತಿಯಲ್ಲಿ ಖಾಸಗಿ ಟ್ಯಾಕ್ಸಿಗಳ ನಿಲ್ದಾಣಕ್ಕೆ ನಗರಸಭೆ ನಿಗದಿತ ಜಾಗ ನೀಡದೆ ಸುಂಕ ವಸೂಲಿಗೆ ಒತ್ತಾಯಿಸುತ್ತಿರುವುದು ನಗರಸಭೆಗೆ ಗೌರವ ತರುವ ಸಂಗತಿಯಲ್ಲ ಎಂದು ತಾಲ್ಲೂಕು ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಟ್ಯಾಕ್ಸಿ ನಿಲ್ದಾಣಕ್ಕೆ ಯಾವುದೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಸುಮಾರು 30 ವರ್ಷಗಳಿಂಗಲೂ ಟ್ಯಾಕ್ಸಿಗಳನ್ನು ಖಾಸಗಿ ಬಸ್ ನಿಲ್ದಾಣದ ಮುಂಭಾಗ ಹಾಗೂ ಗುರುದರ್ಶನ್ ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿಕೊಂಡು ತಮ್ಮ ವ್ಯವಹಾರ ನಿರ್ವಹಿಸುತ್ತಿದ್ದೇವೆ. ಈವರೆಗೂ ರಸ್ತೆ ಪಕ್ಕಗಳಲ್ಲಿ ನಿಲ್ಲಿಸುವುದಕ್ಕೆ ಯಾವುದೇ ಸುಂಕನೀಡುತ್ತಿರಲಿಲ್ಲ. ಆದರೆ, ಈಗ ನಿಲ್ದಾಣದ ಸುಂಕ ಕೇಳುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ. ಕೂಡಲೇ ನಗರದ ಪ್ರಮುಖ ಸ್ಥಳಗಳಲ್ಲಿ ನಮಗೆ ಪ್ರತ್ಯೇಕ ಟ್ಯಾಕ್ಸಿ ನಿಲ್ದಾಣ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಾಳೆ ಪ್ರಗತಿ ಪರಿಶೀಲನಾ ಸಭೆ
ರಾಮನಗರ: ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಜು.1ರಂದು 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.
ಪರೀಕ್ಷೆಗೆ ಅರ್ಜಿ ಆಹ್ವಾನ
ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತು 2013-14 ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು 15ರ ಮನಿ ಆರ್ಡರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಇವರಿಗೆ ಕಳುಹಿಸಿ ಜು.1 ರಿಂದ ಪಡೆಯಬಹುದು. ಅರ್ಜಿ ಸಲ್ಲಿಕೆಗೆ ಆ.31 ಕೊನೆ ದಿನ. 30ರ ದಂಡ ಶುಲ್ಕದೊಂದಿಗೆ ಸೆ.15 ರವರೆಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆಗಳು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸಂಯೋಜಿಸಲಾಗುವುದು. ಪಠ್ಯಕ್ರಮ, ಪಠ್ಯ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂ. 080-26623584 ಸಂಪರ್ಕಿಸಿ.