ಶಿಕ್ಷಣ ಪಡೆದು ಕೀರ್ತಿವಂತರಾಗಿ: ಪ್ರೊ. ಮೂರ್ತಿ
ಕ.ಪ್ರ.ವಾರ್ತೆ , ಮಧುಗಿರಿ , ಜೂ.28
ವಿದ್ಯಾರ್ಥಿ ಜೀವನ ಸುಂದರವಾದುದು. ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ವ್ಯಾಸಂಗ ಮಾಡಿ ಸತತ ಪರಿಶ್ರಮದಿಂದ ಮೇಲೆ ಬಂದು ಪೋಷಕರಿಗೆ, ಕಲಿತ ಶಾಲೆಗೆ ಕೀರ್ತಿ ತರಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮ.ಲ.ನ. ಮೂರ್ತಿ ಹೇಳಿದರು.
ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಪುಸ್ತಕ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಜತಗೆ ಸಾಮಾನ್ಯ ಜ್ಞಾನದಿಂದ ಮುಂದೆ ಬರಲು ಸಾಧ್ಯ. ಆದ ಕಾರಣ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕ್ರೀಡೆ, ಸಂಸ್ಕೃತಿ ಮತ್ತಿತರ ಚಟುವಟಿಕೆಗಳ ಕಡೆಗೂ ಗಮನ ಕೊಡಬೇಕು. ಇಲ್ಲವಾದರೆ ಜೀವನದಲ್ಲಿ ಏಕತಾನತೆ ನೆಲೆಯೂರಿ ಪ್ರತಿಭೆ ಮಸುಕಾಗುತ್ತದೆ ಎಂದರು.
ಟಿವಿವಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಪ್ರೊ. ಸಿ.ಕೃಷ್ಣಪ್ಪ ದೇಶ, ವಿದೇಶಗಳ ನಾಗರಿಕತೆ, ಸಂಸ್ಕೃತಿ, ಸಾಹಿತ್ಯ, ಇತಿಹಾಸ ಹಾಗೂ ಪರಂಪರೆ ತಿಳಿಯಬೇಕಾದರೆ ಪುಸ್ತಕ ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ ಮಾತನಾಡಿ, 'ದೇಶ ಸುತ್ತು ಇಲ್ಲಾ ಕೋಶ ಓದು' ಎಂಬ ನಾಣ್ನುಡಿಯಂತೆ ಸದಭಿರುಚಿಯ ಪುಸ್ತಕ ಓದುವುದರಿಂದ ಜ್ಞಾನವೃದ್ಧಿ ಸಾಧ್ಯ ಎಂದರು.
ಸಂಸ್ಥಾಪಕ ಕಾರ್ಯದರ್ಶಿ ಶೈಲಶ್ರೀ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ರಾಘವೇಂದ್ರ ಸ್ವಾಗತಿಸಿ, ದೇವರಾಜು ನಿರೂಪಿಸಿ ವಂದಿಸಿದರು.