ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ಲಂ ನಿವಾಸಿಗಳಿಂದ ಶಾಸಕರ ಕಚೇರಿ ಮುತ್ತಿಗೆ

Vishwanath S
Updated On : 30 Jun 2013, 12:12 pm

ಕ.ಪ್ರ.ವಾರ್ತೆ ,  ತುಮಕೂರು ,  ಜೂ. 29
ಕರ್ನಾಟಕದ ಸ್ಲಂ ನಿವಾಸಿಗಳ ಜನಸಂಖ್ಯಾ ಆಧಾರದಲ್ಲಿ ಬಜೆಟ್‌ನಲ್ಲಿ ಪಾಲು ನಿಗದಿಗೊಳಿಸಲು, ಕೊಳಗೇರಿ ನಿವಾಸಿಗಳಿಗೆ ಭೂಮಿಹಕ್ಕು ಖಾತ್ರಿಗೊಳಿಸಲು ಆಗ್ರಹಿಸಿ ನಗರ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಚಿವರನ್ನು ನೇಮಿಸಲು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕದ ವತಿಯಿಂದ ಶಾಸಕರ ಮನೆ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಶಾಸಕರ ಮನೆ, ಕಚೇರಿಗಳಿಗೆ ಮುತ್ತಿಗೆ ಹಾಕಿ ಶಾಸಕರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ತುಮಕೂರಿನಲ್ಲಿ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಮನವಿಯನ್ನು ನೀಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರಾದ ಡಾ.ರಫಿಕ್ ಅಹಮದ್, ಸ್ಲಂ ನಿವಾಸಿಗಳ ಜನಸಂಖ್ಯಾ ಆಧಾರದಲ್ಲಿ ಪಾಲಿಗಾಗಿ ಈಗಾಗಲೇ ಮುಖ್ಯಮಂತ್ರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ನಿಮ್ಮ ಉಳಿದ ಹಕ್ಕೋತ್ತಾಯಗಳನ್ನು ಆದ್ಯತೆ ಮೇರೆಗೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದರು. ಇದ್ದಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಎಂ.ಆರ್. ಹುಲಿನಾಯ್ಕರ್ ಮನವಿ ಸ್ವೀಕರಿಸಿ ವಿಧಾನ ಪರಿಷತ್ ಸದಸ್ಯನಾದಾಗಿನಿಂದಲೂ ಕೊಳಗೇರಿ ನಿವಾಸಿಗಳ ಹಾಗೂ ಕೊಳಗೇರಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೂ ಸದಾ ಕೊಳಗೇರಿ ನಿವಾಸಿಗಳ ನ್ಯಾಯಸಮ್ಮತ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದರು. ಮತ್ತು ತಮ್ಮ ಮನವಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸುವುದಾಗಿ ತಿಳಿಸಿದರು.
ತಮ್ಮ ಸರ್ಕಾರದ ಬಜೆಟ್‌ನಲ್ಲಿ 2011ರ ಜನಗಣತಿ ಪರಿಗಣಿಸಿ ರಾಜ್ಯದಲ್ಲಿರುವ ಸ್ಲಂ ನಿವಾಸಿಗಳು ನಗರ ಬಡಜನರ ಜನಸಂಖ್ಯೆಗೆ ಅನುಗುಣವಾಗಿ ರಾಜಸ್ವದಲ್ಲಿ ಹಣವನ್ನು ಮೀಸಲಿಟ್ಟು ಇದರ ಅನುಷ್ಠಾನಕ್ಕೆ ಸಾಮಾಜಿಕ ನ್ಯಾಯ ಸಚಿವಾಲಯವನ್ನು ಘೋಷಿಸಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಉದ್ದೇಶಿಸಿರುವ ನರ್ಮ್ ಯೋಜನೆಯ ಸ್ಲಂ ಮುಕ್ತ ನಗರಗಳ ಭಾಗವಾಗಿ ರಾಜೀವ್ ಆವಾಜ್ ಯೋಜನೆಯಲ್ಲಿ ಕೊಳಗೇರಿ ನಿವಾಸಿಗಳಿಗೆ ಭೂಮಿ ಹಕ್ಕನ್ನು ನೀಡಿ ಒಂಟಿ ಮನೆಗಳನ್ನೇ ನಿರ್ಮಿಸಿಕೊಡಲು ಬಜೆಟ್‌ನಲ್ಲಿ ಘೋಷಿಸಬೇಕು. ರಾಜ್ಯದಲ್ಲಿರುವ ಕೊಳಗೇರಿ ನಿವಾಸಿಗಳ ಪುನರ್ ವಸತಿಗೆ ಭೂಸ್ವಾಧೀನ ಮಾಡಲು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಈ ಬಜೆಟ್‌ನಲ್ಲಿ 500 ಕೋಟಿ ಮೀಸಲಿಡಬೇಕು. ಮೂಲ ಸೌಲಭ್ಯ ಕಲ್ಪಿಸಲು ಪ್ರತ್ಯೇಕವಾಗಿ 500 ಕೋಟಿ ನೀಡಬೇಕೆಂದು ಆಗ್ರಹಿಸಿದ್ದಾರೆ.
2013ರ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಬಜೆಟ್‌ನಲ್ಲಿ ಹಣ ಮೀಸಲಿಟ್ಟು ರಾಜ್ಯದಲ್ಲಿರುವ ಎಲ್ಲಾ ಕೊಳಗೇರಿ ನಿವಾಸಿಗಳಿಗೆ ಭೂಮಿ ಹಕ್ಕನ್ನು ನೀಡಬೇಕು ಮತ್ತು ಅಘೋಷಿತ ಕೊಳಚೆ ಪ್ರದೇಶಗಳನ್ನು ಒಂದೇ ಬಾರಿ ಘೋಷಿಸಲು ಕೊಳಗೇರಿ ಅಭಿವೃದ್ಧಿ ಮಂಡಲಿಗೆ ಆದೇಶಿಸಬೇಕು.
ಕೊಳಗೇರಿ ನಿವಾಸಿಗಳಿಗೆ ಸಾಮಾಜಿಕ ಭದ್ರತೆ ನೀಡುವ ಸಲುವಾಗಿ ವಿಧವೆಯರಿಗೆ ವಿಕಲ ಚೇತನರಿಗೆ ವಯೋ ವೃದ್ಧರಿಗೆ ಹಾಗೂ ನಿರ್ಗತಿಕರಿಗೆ ಮಾಸಿಕ 3000 ಭತ್ಯೆ ನೀಡಲು ಬಜೆಟ್‌ನಲ್ಲಿ ಘೋಷಿಸಬೇಕು ಹಾಗೂ ಕೊಳಗೇರಿ ನಿವಾಸಿಗಳನ್ನು ಯಶಸ್ವಿನಿ ಯೋಜನೆಗೆ ಒಳಪಡಿಸಬೇಕು.
ಈಗಾಗಲೇ ಕೊಳಗೇರಿ ನಿವಾಸಿಗಳಿಗೆ ನಿರ್ಮಾಣ ಮಾಡಿರುವ ಆಶ್ರಯ ಮನೆಗಳು ಮತ್ತು ವಾಲ್ಮೀಕಿ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ನಿರ್ಮಾಣವಾಗಿರುವ ಮನೆಗಳ ಸಾಲ ಮನ್ನಾವನ್ನು ಬಜೆಟ್‌ನಲ್ಲಿ ಘೋಷಿಸಬೇಕು.
ಹೋರಾಟದಲ್ಲಿ ಪ್ರಧಾನ ಕಾರ್ಯದರ್ಶಿ ಸೈಯದ್ ಅಲ್ತಾಫ್, ಸಂಘಟನಾ ಕಾರ್ಯದರ್ಶಿ ಶೆಟ್ಟಾಳಯ್ಯ, ಪದಾಧಿಕಾರಿಗಳಾದ ಅರುಣ್, ರಘು, ಗಾಯತ್ರಿ, ಶೃತಿ, ಕೆಂಪೇಶ್ವರಿ, ರಾಜಣ್ಣ, ಕೆಂಪೇಗೌಡ, ಕಣ್ಣ, ಮುರುಗ, ರಜಿಯಾಭಿ, ರವಿಕುಮಾರ್, ಸಿದ್ದಮ್ಮ, ಗಂಗಮ್ಮ, ಗೌರಮ್ಮ, ಮತ್ತಿತರ ಸ್ಲಂ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement