ತಮ್ಮಣ್ಣ ಜೆಡಿಎಸ್ ಸೇರ್ಪಡೆಗೆ ಕಲ್ಪನಾ ಬೆಂಬಲಿಗರ ಆಕ್ರೋಶ
ಮದ್ದೂರು: ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರ ಜೆಡಿಎಸ್ ಸೇರ್ಪಡೆಗೆ ಪಕ್ಷದಲ್ಲಿ ವೇದಿಕೆ ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ ಶಾಸಕಿ ಕಲ್ಪನಾ ಸಿದ್ದರಾಜು ಅವರ ಬೆಂಬಲಿಗರು ಆಕ್ರೋಶಗೊಂಡು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಂಡ್ಯದಲ್ಲಿ ಶುಕ್ರವಾರ ತಮ್ಮಣ್ಣ ಅವರ ಜೆಡಿಎಸ್ ಸೇರ್ಪಡೆ ಕುರಿತಂತೆ ಕರೆದಿದ್ದ ಪತ್ರಿಕಾಗೋಷ್ಟಿಗೆ ತೆರಳದಂತೆ ಶಾಸಕಿ ಬೆಂಬಲಿಗರು ಪಕ್ಷದ ತಾಲೂಕು ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರನ್ನು ಪಕ್ಷದ ಕಚೇರಿಯಲ್ಲಿ ದಿಗ್ಬಂಧನ ವಿಧಿಸಿದರು.
ತಮ್ಮಣ್ಣ ಅವರು ಜೆಡಿಎಸ್ ಸೇರ್ಪಡೆ ಬಗ್ಗೆ ಶಾಸಕಿ ಕಲ್ಪನಾ ಸಿದ್ದರಾಜು ಈವರೆಗೂ ಪರ-ವಿರೋಧದ ಯಾವ ಹೇಳಿಕೆಯನ್ನು ನೀಡಿಲ್ಲ. ಆದರೆ, ಬೆಂಬಲಿಗರ ಆಕ್ರೋಶ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಮದ್ದೂರು ಕ್ಷೇತ್ರದ ಜೆಡಿಎಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು, ತಮ್ಮಣ್ಣ ಜೆಡಿಎಸ್ ಸೇರ್ಪಡೆ ಬಗ್ಗೆ ಸ್ಥಳೀಯವಾಗಿ ಪತ್ರಿಕಾಗೋಷ್ಟಿ ಮಾಡದೆ ಮಂಡ್ಯದಲ್ಲಿ ಮಾಡುವ ಔಚಿತ್ಯವಾದರೂ ಏನಿತ್ತು. ಇದು ಶಾಸಕಿ ಕಲ್ಪನಾ ಸಿದ್ದರಾಜು ಹಾಗೂ ಪದಾಧಿಕಾರಿಗಳನ್ನು ಕಡೆಗಣಿಸುವ ಉದ್ದೇಶ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಕಲ್ಪನಾ ಸಿದ್ದರಾಜು ಅವರಿಗೆ ಡಿ.ರಮೇಶ್ ಪತ್ರಿಕಾಗೋಷ್ಟಿ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ತಾಲೂಕು ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದ್ದಾರೆ. ಇದರ ಉದ್ದೇಶ ಶಾಸಕರು ಮತ್ತು ಬೆಂಬಲಿಗರನ್ನು ಸ್ವಯಂ ಪಕ್ಷ ತೊರೆಯುವಂತೆ ಮಾಡುವ ಉದ್ದೇಶ ಎಂದು ಆರೋಪಿಸಿದರು.
ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ “¸’ ಫಾರಂ ವಿತರಣೆ ವೇಳೆ ಶಾಸಕಿ ಕಲ್ಪನಾ ಅವರನ್ನು ಕಡೆಗಣಿಸಲಾಗಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯದ ತಮ್ಮಣ್ಣ ಅವರ ಅಣತಿಯಂತೆ ಬಿ ಫಾರಂ ಹಂಚಿಕೆ ಮಾಡಲಾಗಿದೆ ಎಂದು ಬೆಂಬಲಿಗರೂ ದೂರಿದರು.
ಪಕ್ಷದ ತಾಲೂಕು ಅಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ ಮಾತನಾಡಿ, ಮಾರ್ಚ್ 3ರಂದು ಭಾರತೀನಗರದಲ್ಲಿ ನಡೆಯುವ ತಮ್ಮಣ್ಣ ಅವರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮಕ್ಕೆ ತಾವು ಸೇರಿದಂತೆ ಪಕ್ಷದ ಕಾರ್ಯಕರ್ತರು ಬಹಿಷ್ಕರಿಸುವುದಾಗಿ ಹೇಳಿದರು.
ಈ ಸಂದರ್ಭ ಪಕ್ಷದ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಪುಟ್ಟಲಿಂಗಯ್ಯ, ಕೆಂಪರಾಜು, ದೇವಯ್ಯ, ನಗರಕೆರೆ ಪ್ರಸನ್ನ, ಕದಲೂರು ರವಿ, ಚನ್ನಸಂದ್ರ ಚನ್ನವೀರೇಗೌಡ, ಎ.ಎಸ್. ಲಕ್ಷ್ಮಣ್, ಪ್ರಸನ್ನ, ಸುರೇಶ್, ಕಾಳೇಗೌಡ, ಮಹದೇವು, ರಾಮಕೃಷ್ಣ, ನಿಡಘಟ್ಟ ಬೋರಣ್ಣ ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.