ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅರ್ಥಪೂರ್ಣವಾಗಿ ನಡೆದ ಕಲ್ಪತರು ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ

Parashurama
Updated On : 3 Mar 2013, 11:33 am

ತಿಪಟೂರು: ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾಗಿರುವ ತಿಪಟೂರು ಕಲ್ಪತರು ವಿದ್ಯಾಸಂಸ್ಥೆಯ ಸುವರ್ಣ ಮತ್ತು ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವವು ಮೂರು ದಿನಗಳ ಕಾಲ ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ನಡೆಯಿತು.
 ನ್ಯಾ. ವಿ.ಎಸ್.ಮಳೀಮಠ ಅವರ ಉದ್ಘಾಟನಾ ಭಾಷಣದಿಂದ ಹಿಡಿದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮಾರೋಪ ಭಾಷಣದವರೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನಗಳು, ಕೃಷಿ ಮೇಳ, ಆಹಾರ ಮೇಳ ಮತ್ತು ಪುಸ್ತಕ ಪ್ರದರ್ಶನ ಮಾರಾಟಗಳು ನಡೆದವು. ಕಲ್ಪತರು ನಾಡು ನುಡಿ ಕುರಿತಾದ ವಿಚಾರ ಗೋಷ್ಠಿ ಮತ್ತು ಕವಿ ಗೋಷ್ಠಿಗಳು ಅರ್ಥಪೂರ್ಣವಾಗಿ ನಡೆದವು. ಈ ಎರಡು ಗೋಷ್ಠಿಗಳ ಅಧ್ಯಕ್ಷತೆಯನ್ನು ಹೆಸರಾಂತ ಕವಿ ಮತ್ತು ಕಲ್ಪತರು ಕಾಲೇಜಿನ ಹಿರಿಯ ವಿದ್ಯಾರ್ಥಿಯೂ ಆದ ಪ್ರೊ.ಎಸ್.ಜಿ. ಸಿದ್ದರಾಮಯ್ಯನವರು ವಹಿಸಿದ್ದರು. ಅವರ ತಮ್ಮ ಅಧ್ಯಕ್ಷ ಭಾಷಣದಲ್ಲಿ ಕಲ್ಪತರು ನಾಡಿನ ವಿಶೇಷವಾದ ಆತ್ಮೀಯತೆ, ನುಡಿಯ ಸೊಬಗನ್ನು ಕುರಿತು ಮಾತನಾಡುತ್ತಾ ಈ ನುಡಿಗೆ ವಿಶೇಷವಾದ ಸೊಗಡಿದ್ದು, ಸತ್ವಯುತವಾದ ಲೇಖಕರು, ಕವಿಗಳು ಈ ಪ್ರಾಂತ್ಯದಿಂದ ಮೂಡಿಬಂದಿದ್ದಾರೆ ಎಂಬುದನ್ನು ವಿವರಿಸಿದರು.
ಪ್ರಾತ್ಯಕ್ಷಿತೆ ಮೂಲಕ:  ಬೆಂಗಳೂರು ಸೌಧ ತಂತ್ರಜ್ಞಾನದ ರಾಷ್ಟ್ರೀಯ ತರಬೇತಿ ಕೇಂದ್ರದ ನಿರ್ದೇಶಕ ಡಾ.ಎಚ್. ನಾಗನಗೌಡರು ಕಲ್ಪತರು ನಾಡಿನಲ್ಲಿ ಪರ್ಯಾಯ ಮರುಬಳಕೆಯ ಶಕ್ತಿ ಮೂಲಗಳು ಎಂಬ ವಿಷಯ ಕುರಿತು ಮಾತನಾಡುತ್ತಾ ಕಲ್ಪತರು ನಾಡಿನಲ್ಲಿ ಯಥೇಚ್ಛವಾಗಿ ತೆಂಗು ಬೆಳೆ ಇರುವುದರಿಂದ ಅನೇಕ ರೀತಿಯ ವಸ್ತುಗಳನ್ನು ಉಪಯುಕ್ತವಾದ ಉಪವಸ್ತುಗಳನ್ನು ಇಲ್ಲಿ ತಯಾರಿಸಬಹುದಾಗಿದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಆರ್ಥಿಕವಾಗಿ ಸಬಲರಾಗಬಹುದು ಎಂಬ ವಿಚಾರವನ್ನು ಪ್ರಾತ್ಯಕ್ಷಿತೆ ಮೂಲಕ ತಿಳಿಸಿದರು.
ದೃಢಪಡಿಸಬಹುದು: ಕಲ್ಪತರು ನಾಡಿನ ನುಡಿ ಕುರಿತು ಡಾ.ಅಬ್ದುಲ್ ಹಮೀದ್ ಮಾತನಾಡುತ್ತಾ ಕಲ್ಪತರು ನುಡಿಗೆ ನಾಲ್ಕು ಸಾವಿರ ವರ್ಷಗಳ ಇತಿಹಾಸ ಇರುವುದನ್ನು ದಾಖಲೆಗಳ ಮೂಲಕ ದೃಢಪಡಿಸಬಹುದು. ಇಲ್ಲಿನ ನುಡಿ ತುಂಬಾ ಪುರಾತನವಾದದ್ದು, ಈ ಬಗ್ಗೆ ಅಭಿಮಾನ ಪಡುವುದು ಮಾತ್ರವಲ್ಲ ಸಮರ್ಥವಾಗಿ ಬಳಸಬೇಕೆಂದು ಕರೆ ನೀಡಿದರು.
ಸಾವಯವ ಗೊಬ್ಬರ ಬಳಸಿ: ಡಾ.ವಿಜಯ ಅಂಗಡಿ ಕಲ್ಪತರು ನಾಡಿನ ಕೃಷಿ ಕುರಿತ ತಮ್ಮ ವಿಚಾರಗಳನ್ನು ಮಂಡಿಸುತ್ತಾ, ಇಂದಿನ ಕೃಷಿಯಲ್ಲಿ ಸುಖವಿಲ್ಲ ಎಂಬ ಅಭಿಪ್ರಾಯವಿದೆ. ಆದರೆ ಮುಂದೊಂದು ದಿನ ಕೃಷಿಗೆ ಮಹತ್ವದ ಸ್ಥಾನ ಬರುತ್ತದೆ. ಇಲ್ಲಿನ ರೈತರು ಕೇವಲ ತೆಂಗನ್ನು ಮಾತ್ರ ಬೆಳೆಯುತ್ತಿದ್ದು, ಇದರ ಜೊತೆ ಉಪಬೆಳೆಗಳನ್ನು ಬೆಳೆಯಬೇಕೆಂದರಲ್ಲದೆ ಸಾವಯವ ಗೊಬ್ಬರವನ್ನು ಬಳಸುವಂತೆ ಕರೆ ನೀಡಿದರು.
ಡಿ.ಎಸ್.ರಾಮಸ್ವಾಮಿಯವರು ಆಶಯ ನುಡಿಗಳನ್ನಾಡುತ್ತಾ ಆಧುನಿಕ ಸಮಕಾಲಿನ ಕಾವ್ಯ ಸಂದರ್ಭದಲ್ಲಿ ಕಲ್ಪತರು ಕಾಲೇಜಿನಲ್ಲಿ ಓದಿದ ಕವಿಗಳ ಪಾತ್ರ ಅಪಾರವಾಗಿದೆ ಎಂಬುದನ್ನು ಉದಾಹರಣೆ ಸಹಿತ ಮನದಟ್ಟು ಮಾಡಿದರು.
 ಕಲ್ಪತರು ವಿದ್ಯಾಸಂಸ್ಥೆಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ನಾಡಿನ ಭರವಸೆಯ ಕವಿಗಳಾಗಿ ಹೊರಹೊಮ್ಮುತ್ತಿರುವ ಎಂಟು ಮಂದಿ ಕವಿಗಳಾದ ಎಸ್.ಕೆ.ಮಂಜುನಾಥ್, ಡಿ.ಕೆ.ರಮೇಶ್, ಡಾ.ಕೆ.ಬಿ. ಸರಸ್ವತಿ, ಹಾಲ್ಕುರಿಕೆ ಶಿವಶಂಕರ್, ಪಿ. ಮಂಜುನಾಥ್, ಕೆ.ಕರಿಸ್ವಾಮಿ, ಉಗಮಶ್ರೀನಿವಾಸ್, ಕಂಪಾರಹಳ್ಳಿ ಶಾಂತ ಮತ್ತು ಸ್ಥಳೀಯವಾಗಿ ಆಲೂರು ದೊಡ್ಡನಿಂಗಪ್ಪ, ರೂಪಹಾಸನ, ಕೃಷ್ಣಮೂರ್ತಿ ಬಿಳಿಗೆರೆ ಅವರು ಭಾಗವಹಿಸಿ ಸಮಕಾಲಿನ ಸಂವೇದನೆಯನ್ನು ಬಿಂಬಿಸುವ ಕವಿತೆಗಳನ್ನು ವಾಚನ ಮಾಡಿದರು.
 ಬಿ.ಕಾಂ.ವಿದ್ಯಾರ್ಥಿಗಳಾದ ಗೀತಾ ಮತ್ತು ಶ್ವೇತ ಭಾವಗೀತೆ ಹಾಡಿದರು. ಪ್ರೊ.ಚೆನ್ನಬಸಪ್ಪನವರು ವಂದಿಸಿದರು. ಡಾ.ಸಿದ್ದಗಂಗಯ್ಯ ಹೊಲತಾಳ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಪರವಾಗಿ ವಾಚನ ಮಾಡಿದ ಎಲ್ಲಾ ಕವಿಗಳನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಎಚ್.ವಿ. ಕೇಶವಮೂರ್ತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾವಯವ ಕೃಷಿ ವಸ್ತು ಮತ್ತು ಆಹಾರ ಸಾಮಗ್ರಿ ಹಣ್ಣು ಹಂಪಲನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments