'ಗಡಿನಾಡಲ್ಲಿ ಕನ್ನಡ ಕೋಟೆ ಕಟ್ಟಿದ ಧೀರ ಮಹಿಳೆ ಲಿಗಾಡೆ'
ತುಮಕೂರು: ಗಡಿನಾಡು ಸೊಲ್ಲಾಪುರದಲ್ಲಿ ಕನ್ನಡ ಕೋಟೆ ಕಟ್ಟಿದ ಧೀರ ಮಹಿಳೆ ಡಾ. ಜಯದೇವಿ ತಾಯಿ ಲಿಗಾಡೆ. ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಬ್ರಿಟಿಷರು ಒಡ್ಡಿದ ಪ್ರಶಸ್ತಿ ಆಮಿಷ ತಿರಸ್ಕರಿಸಿದವರು. ಅಂತೆಯೇ ಕನ್ನಡಕ್ಕಾಗಿ ಮಹಾರಾಷ್ಟ್ರದವರು ನೀಡಲು ಬಂದ ಪ್ರಶಸ್ತಿಯನ್ನೂ ತಿರಸ್ಕರಿಸಿ ಕನ್ನಡತನ ಮೆರೆದ ಮೇರು ಮಹಿಳೆ ಎಂದು ಉಪನ್ಯಾಸಕ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ತಿಳಿಸಿದರು.
ಅವರು ತುಮಕೂರಿನ ಎಸ್.ಐ.ಟಿ.ಬಡಾವಣೆಯ ಹೆಚ್.ಎಸ್.ಆರ್ .ಸಭಾಂಗಣದಲ್ಲಿ ನಗೆಮುಗುಳು ಹಾಸ್ಯ ಮಾಸಪತ್ರಿಕೆ ಮತ್ತು ಪೂರ್ಣಿಮಾ ಸಾಹಿತ್ಯ ಮಂದಿರ ಪುಸ್ತಕ ಪ್ರಕಾಶನ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಮಾಸಿಕ ಅಧ್ಯಯನ ಗೋಷ್ಠಿಯ 46 ನೇ ಕಾರ್ಯಕ್ರಮದಲ್ಲಿ ದಿ. ಜಯದೇವಿ ತಾಯಿ ಲಿಗಾಡೆಯವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸೊಲ್ಲಾಪುರದಲ್ಲಿ ಎತ್ತ ನೋಡಿದರೂ ಮರಾಠಿ ಶಾಲೆಗಳೇ ತಲೆ ಎತ್ತಿದ್ದವು. ಅಲ್ಲಿ ಕನ್ನಡ ಶಾಲೆಯನ್ನು ಪ್ರಾರಂಭಿಸಿದ ದಿಟ್ಟ ಮಹಿಳೆ ಜಯದೇವಿ ತನ್ನ ಮನೆಯ ಸುತ್ತಮುತ್ತಲಿನವರಿಗೆ ಕನ್ನಡ ಕಲಿಸುವ ದೀಕ್ಷೆ ತೊಟ್ಟರು. ಇಂದಿಗೂ ಸೊಲ್ಲಾಪುರದಲ್ಲಿ ಕನ್ನಡ ಉಳಿದಿದೆ ಎಂದರೆ ಅದಕ್ಕೆ ಈ ತಾಯಿಯೇ ಕಾರಣ. ಸೊಲ್ಲಾಪುರದಲ್ಲಿ ಮರಾಠಿ ಪ್ರಾಬಲ್ಯ ಕಡಿಮೆ ಮಾಡಲು 1950 ರಲ್ಲಿ ಕನ್ನಡ ಕೋಟೆ ಎಂಬ ಸಂಸ್ಥೆ ಸ್ಥಾಪಿಸಿದರು. ಕನ್ನಡವೇ ನನ್ನ ಧರ್ಮ, ಸಿದ್ಧರಾಮ ನನ್ನ ಉಸಿರು ಎಂದು ನಿರ್ಭಿಡೆಯಿಂದ ಹೇಳುತ್ತಿದ್ದ ಜಯದೇವಿಯವರು 1969 ರಲ್ಲಿ ಸಿದ್ಧರಾಮೇಶ್ವರ ಪುರಾಣ ಎಂಬ ಮಹಾಕೃತಿಯನ್ನು ರಚಿಸಿದರು. ಇದು ಕನ್ನಡದ ಐದು ಆಧುನಿಕ ಮಹಾಕೃತಿಗಳಲ್ಲಿ ಒಂದಾಗಿದೆ ಎಂದು ಸಿದ್ಧರಾಮಯ್ಯ ವಿವರಿಸಿದರು.
ಮೊದಲ ಮಹಿಳಾ ಅಧ್ಯಕ್ಷೆ: ಜಯದೇವಿಯವರ ಸಾಹಿತ್ಯ ಸಾಧನೆಯನ್ನು ಗುರುತಿಸಿ 1974 ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯನ್ನಾಗಿ ಮಾಡಲಾಯಿತು. ಇದೊಂದು ನಿಜಕ್ಕೂ ಐತಿಹಾಸಿಕ, ಅವಿಸ್ಮರಣೀಯ ಕ್ಷಣ. ಇಂತಹ ಮಹಾನ್ ಸಾಧಕಿಯನ್ನು ಕನ್ನಡಿಗರು ಹಾಗೂ ಮರಾಠಿಗರು ಉಪೇಕ್ಷೆ ಮಾಡಿದ್ದಾರೆ ಎಂದು ಎಂ.ಜಿ.ಸಿದ್ಧರಾಮಯ್ಯ ವಿಷಾದಿಸಿದರು.
ಮುಖ್ಯ ಅತಿಥಿ ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರೂ, ಕನ್ನಡ ಚಳವಳಿಗಾರರೂ ಆದ ತೊ.ಗ. ಅಡವೀಶಪ್ಪ, ಪೌಳಿ ಶಂಕರಾನಂದಪ್ಪ ಮಾತನಾಡಿದರು.
ಮತ್ತೊಬ್ಬ ಮುಖ್ಯ ಅತಿಥಿ ಸಮಾಜ ಸೇವಕಿ ರೇಣುಕಾ ಪರಮೇಶ್ ಉಪಸ್ಥಿತರಿದ್ದರು. ಎಚ್.ಎಸ್. ರಾಮಣ್ಣ ಸ್ವಾಗತಿಸಿ, ವಂದಿಸಿದರು. ಗಣ್ಯರಾದ ಜಿ.ವಿ.ವಿ.ಶಾಸ್ತ್ರಿ, ಈ. ಲೋಕೇಶ್ವರಪ್ಪ, ಮಿಮಿಕ್ರಿ ಈಶ್ವರಯ್ಯ, ಪ್ರೊ.ಕೆ.ಎಸ್. ವೆಂಕಟೇಶ್, ಅಬ್ಬಿನಹೊಳೆ ಸುರೇಶ್ ಮತ್ತಿತರ ಗಣ್ಯರು ಹಾಜರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.