ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಬುದ್ಧತೆಯೂ ಇಲ್ಲ, ಪ್ರಬುದ್ಧ ಕರ್ನಾಟಕವೂ ಇಲ್ಲ

Parashurama
Updated On : 3 Mar 2013, 11:32 am

ತುಮಕೂರು: ಪ್ರಬುದ್ಧತೆಯೂ ಇಲ್ಲ. ಪ್ರಬುದ್ಧ ಕರ್ನಾಟಕದಂತಹ ನಿಯತಕಾಲಿಕವೂ ಇಲ್ಲದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಖ್ಯಾತ ಇತಿಹಾಸಜ್ಞ, ಐಸಿಎಚ್‌ಆರ್‌ನ ಮಾಜಿ ಅಧ್ಯಕ್ಷ, ಬೆಂಗಳೂರು ಎನ್‌ಐಎಎಸ್‌ನ ಡಾ.ಎಸ್. ರಾಧಾಕೃಷ್ಣನ್ ಪೀಠದ ಪ್ರಾಧ್ಯಾಪಕ ಡಾ.ಎಸ್. ಶೆಟ್ಟರ್ ವಿಷಾದಿಸಿದರು.
ಅವರು ತುಮಕೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ ಸಂಶೋಧಕ, ಇತಿಹಾಸ ಪ್ರಾಧ್ಯಾಪಕ ಡಾ. ಡಿ.ಎನ್. ಯೋಗೀಶ್ವರಪ್ಪ ಅವರ ತುಮಕೂರು ಜಿಲ್ಲಾ ಸಂಶೋಧನಾ ಲೇಖನಗಳ ಕೃತಿ ಕಲ್ಪಶೋಧ ಬಿಡುಗಡೆ ಮಾಡಿ ಮಾತನಾಡಿದರು.
ಇಂದಿನ ಬಹುತೇಕ ಅಧ್ಯಾಪಕರಲ್ಲಿ ಪ್ರಬುದ್ಧತೆಯ ಕೊರತೆಯಿದೆ. ಅದೇ ರೀತಿ ಸಂಶೋಧನಾ ಲೇಖನಗಳ ಪ್ರಕಟಣೆಗೆ ಅನ್ವರ್ಥನಾಮದಂತಿದ್ದ ಪ್ರಬುದ್ಧ ಕರ್ನಾಟಕದಂತಹ ನಿಯತಕಾಲಿಕಗಳು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ವಿಶ್ವ ವಿದ್ಯಾಲಯಗಳು ಬೌದ್ಧಿಕವಾಗಿ ದಿವಾಳಿಯಾಗಿರುವಂತಹ ವಾತಾವರಣ ನಿರ್ಮಾಣವಾಗಿದೆ. ಇದೊಂದು ವಿಷಾದನೀಯ, ಆತಂಕಕಾರಿ ಸಂಗತಿ ಎಂದು ಶೆಟ್ಟರ್ ತಿಳಿಸಿದರು.
ಸಂಶೋಧನಾ ಪ್ರವೃತ್ತಿ ಕಡಿಮೆಯಾಗುತ್ತಿದೆ: ಹಿಂದೆ ವಿವಿಗಳಲ್ಲಿ  ಸಂಶೋಧಕರ ಪಟ್ಟಿಯೇ ಇತ್ತು. ಸಂಶೋಧನಾ ಪ್ರವೃತ್ತಿ ಹೆಚ್ಚಿತ್ತು. ಸಂಶೋಧನಾ ಪ್ರವೃತ್ತಿಯಲ್ಲಿ  ತೊಡಗಿಸಿಕೊಳ್ಳದವರು ಅಧ್ಯಾಪಕರಾಗಿದ್ದರು. ಅವರೆಲ್ಲಾ ಶ್ರೇಷ್ಠ ಅಧ್ಯಾಪಕರೇ ಆಗಿದ್ದರು. ಆದರೆ ಇಂದು ಬಹುತೇಕ ಸಂಶೋಧನಾ ಪ್ರವೃತ್ತಿಯೂ ಇಲ್ಲ. ಸಂಶೋಧಕರ ಪಟ್ಟಿಯೂ ಇಲ್ಲ, ಶ್ರೇಷ್ಠ ಅಧ್ಯಾಪಕರೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.  ಇದೊಂದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.
ಶಾಸ್ತ್ರೀಯ ಸ್ಥಾನಮಾನ ಪಡೆದ್ದಾಯಿತು: ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನ-ಮಾನಕ್ಕಾಗಿ ಹೋರಾಟ ನಡೆದು, ಪಡೆದದ್ದಾಯಿತು. ಆದರೆ ಶಾಸ್ತ್ರೀಯ ಸ್ಥಾನ-ಮಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ದುಡಿಯುವ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಪ್ರಬುದ್ಧ ಪ್ರಾಧ್ಯಾಪಕರು ಈಗ ಎಲ್ಲಿದ್ದಾರೆ ಎಂದು ಶೆಟ್ಟರ್ ಮಾರ್ಮಿಕವಾಗಿ ಪ್ರಶ್ನಿಸಿದರು. ಹಿಂದೆ ಪಾಠಕ್ಕೆ ಮುಂಚೆ ಅಧ್ಯಾಪಕರು ಸಿದ್ಧತೆ ನಡೆಸುತ್ತಿದ್ದರು. ತಮಗೆ ನಿಲುಕಿದನ್ನಾಷ್ಟದರೂ ಜೀರ್ಣಿಸಿಕೊಳ್ಳುವ ಪ್ರವೃತ್ತಿಯನ್ನು ಶೇ. 90 ರಷ್ಟು ಅಧ್ಯಾಪಕರು ಬೆಳೆಸಿಕೊಂಡಿದ್ದರು. ಆದರೆ ಇಂದು ಆ ಪರಿಸ್ಥಿತಿ ಇಲ್ಲ. ನಾವು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳದ ಹೊರತು,  ಹೊಸದನ್ನು ಬೋಧಿಸಲು ಸಾಧ್ಯವಿಲ್ಲ. ಬೋಧಕರು ಸಂಶೋಧನೆಯನ್ನು ಬೆಳೆಸಿಕೊಂಡಲ್ಲಿ ಅದರ ವಿಸ್ತಾರವೇ ಬೇರೆಯಾಗಿರುತ್ತದೆ ಎಂದರು.
ಪೂಜ್ಯರು ಹೇಳಿದ್ದೆಲ್ಲಾ ಸತ್ಯವಲ್ಲ: ದೇಶದ ಇತಿಹಾಸ ವೈವಿಧ್ಯತೆಯ ಇತಿಹಾಸ. ನಮ್ಮಲ್ಲಿ ಹಿಂದಿನವರು ಹೇಳಿದ್ದನ್ನೆಲ್ಲಾ ಪೂಜ್ಯ ಮನೋಭಾವದಿಂದ ನೋಡಲಾಗುತ್ತದೆ. ಆದರೆ ಇದು ಸರಿಯಲ್ಲ. ಹಿಂದಿನ ಸಂಶೋಧಕರು ತಪ್ಪು ಮಾಡಿದ್ದಾರೆ. ಅವರಿಗೆ ಆ ಅಧಿಕಾರ ಇತ್ತು. ಸಂಶೋಧನೆಯೇ ಇಲ್ಲದಿದ್ದ ಕಾಲದಲ್ಲಿ ಅದು ಸಹಜವಾಗಿತ್ತು. ಆದರೆ ಸೌಜನ್ಯದಿಂದ ಅವರ ತಪ್ಪುಗಳನ್ನು ಎತ್ತಿ ತೋರಿಸಬೇಕೇ ಹೊರತು, ಕಠಿಣವಾಗಲ್ಲ. ಪೂಜ್ಯ ಮನೋಭಾವದಿಂದ ಅವರು ಹೇಳಿದ್ದನ್ನೆಲ್ಲಾ ಒಪ್ಪಬಾರದು. ಇಂದು ಸಂಶೋಧನೆ ಮಾಡಲು ಅಂಧಾನುಕರಣೆ ಬೇಕಿಲ್ಲ. ಪೂಜ್ಯರು ಹೇಳಿದ್ದೆಲ್ಲಾ ಸತ್ಯವಲ್ಲ ಎಂದು ಶೆಟ್ಟರ್ ಪ್ರತಿಪಾದಿಸಿದರು.
ಬರೆದು ಪುಣ್ಯಕಟ್ಟಿಕೊಳ್ಳಿ: ಅಧ್ಯಾಪಕ ವೃತ್ತಿಯಲ್ಲಿದ್ದಾಗಲೂ, ನಿವೃತ್ತಿಯಾದ ಮೇಲೂ ಕೈ ತುಂಬ ಹಣ ಪಡೆಯುತ್ತಿರುವ ಕನ್ನಡ, ಇತಿಹಾಸದ ಪ್ರಾಧ್ಯಾಪಕರೇ ತೀರಿಕೊಳ್ಳುವ ಮುನ್ನ ಒಂದು ಗ್ರಂಥ ಬರೆದು ಪುಣ್ಯಕಟ್ಟಿಕೊಳ್ಳಿ. ಅಧ್ಯಾಪಕ ವೃತ್ತಿಯ ಋಣ ತೀರಿಸಿ ಎಂದು ಶೆಟ್ಟರ್ ಮಾರ್ಮಿಕವಾಗಿ ನುಡಿದರು. ಜತೆಗೆ  ಈಗಿನ ಅಧ್ಯಾಪಕರಿಗೆ ಹಣದ ಕೊರತೆಯಿಲ್ಲ. ಸಕಲ ಸೌಲಭ್ಯಗಳಿವೆ. ತಂತ್ರಜ್ಞಾನ ಮುಂದುವರೆದಿದೆ. ಸಂಶೋಧನೆ ಮಾಡಲು ಅಂಧಾನುಕರಣೆ ಬೇಕಿಲ್ಲ. ಇಂತಹ ಸಂದರ್ಭದಲ್ಲೂ ಅಧ್ಯಾಪಕರು ಸುತ್ತ-ಮುತ್ತ ನೋಡದಿದ್ದರೆ, ಸಂಶೋಧನೆ ಕೈಗೊಳ್ಳದಿದ್ದರೆ ಹೇಗೆ ಎಂದು ಶೆಟ್ಟರ್ ಮಾರ್ಮಿಕವಾಗಿ ಪ್ರಶ್ನಿಸಿದರು.
 ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ. ಮು. ಭಾಸ್ಕರಾಚಾರ್, ಕಾರ್ಯದರ್ಶಿ ಸಣ್ಣ ಹೊನ್ನಯ್ಯ ಕಂಟಲಗೆರೆ, ಕಸಾಪದ ವಜ್ರಪ್ಪ ಚಿಕ್ಕತೊಟ್ಲುಕೆರೆ, ಜಾನಪದ ಸಂಶೋಧಕ ಡಾ.ಎಂ. ಭೈರೇಗೌಡ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments