ಬೆಲೆ ಏರಿಕೆ ಭೂತಕ್ಕೆ ಜನರನ್ನು ಬಲಿಕೊಡುತ್ತಿರುವ ಕಾಂಗ್ರೆಸ್
ಕುಣಿಗಲ್: ಪೆಟ್ರೋಲ್ ಲೀಟರ್ಗೆ 100 ರು., ಡೀಸೆಲ್ ಲೀಟರ್ಗೆ 75ರು., ಗ್ಯಾಸ್ ಸಿಲೆಂಡರ್ 1000 ರು., ಇದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಾಗಿದೆ. ರಾಷ್ಟ್ರದ ಜನತೆಯನ್ನು, ಬೆಲೆ ಏರಿಕೆಯ ಭೂತಕ್ಕೆ ಬಲಿಕೊಡುತ್ತಿರುವ ಕಾಂಗ್ರೆಸ್ಗೆ, ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಭಾನುವಾರ, ಪಟ್ಟಣದಲ್ಲಿ ಪುರಸಭೆಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ರೋಡ್ ಶೋ ನಡೆಸಿ, ಮಾತನಾಡಿದ ಅಶೋಕ್, ತಮ್ಮ ಭಾಷಣದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಅವರು, ಮಾಜಿ ಪ್ರಧಾನಿ ವಾಜಪೇಯಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನಗಳಿಂದ ಸತತವಾಗಿ ಜನಸಾಮಾನ್ಯರು ಬಳಸುವ ಪೆಟ್ರೋಲ್, ಡೀಸೆಲ್, ಸಿಲೆಂಡರ್ ದರವನ್ನು ಮನಬಂದಂತೆ ಏರಿಕೆ ಮಾಡಿದರು ಎಂದು ಆರೋಪಿಸಿದರು.
ನೆಮ್ಮದಿ ಹಾಳು: ಜನಸಾಮಾನ್ಯರು ನೆಮ್ಮದಿಯುತ ಜೀವನ ನಡೆಸದಂತೆ ಮಾಡುವ ಮೂಲಕ ಸಾಮಾನ್ಯ ಜನತೆಯ ಮತಕೇಳುವ ಹಕ್ಕನ್ನು ಕಾಂಗ್ರೆಸ್ ಕಳೆದುಕೊಂಡಿದೆ. ದೇಶದ ಜನರ ಭಾವನೆಗೆ ಹೆದರದೆ ಪ್ರತಿ ತಿಂಗಳು ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡುತ್ತ ಜನತೆಯ ಶೋಷಣೆಗೆ ಇಳಿದಿದೆ. ಜನವಿರೋಧಿಯಾಗಿದೆ. ಇನ್ನು ಸಿಲೆಂಡರ್ ವಿತರಣೆಯಲ್ಲೂ ಗೊಂದಲಮಯ ಕ್ರಮ ಕೈಗೊಳ್ಳುತ್ತಾ ಗೃಹಿಣಿಯರನ್ನು ಪರದಾಡುವಂತೆ ಮಾಡಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ, ಗೃಹಿಣಿಯರಿಗೆ ಒಂದು ಸಿಲೆಂಡರ್ ಸಾಲದು ಎಂದು ಎರಡು ಸಿಲೆಂಡರ್ ನೀಡಿದರೆ, ಇದೆ ಕಾಂಗ್ರೆಸ್ ಸಿಲೆಂಡರ್ ನೀಡುವುದಿರಲಿ, ವಿತರಣೆ ನಿಯಂತ್ರಣದ ಮೂಲಕ ಜನ ವಿರೋಧಿ ಧೋರಣೆ ತಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವನ್ನು ಮುಲಾಜಿಲ್ಲದೆ ಜನತೆ ತಿರಸ್ಕರಿಸಬೇಕೆಂದ ಅವರು, ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಮುಂದಿನ ಪ್ರಧಾನಿಯನ್ನಾಗಿ ಘೋಷಿಸುವ ದಿಸೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಮುಂದಿನ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.