ಇವರು ಮನೆ, ಮನೆ ಪ್ರಚಾರಕ್ಕೆ... ಆದರೆ ಅಭ್ಯರ್ಥಿಯಲ್ಲ...
ಕ.ಪ್ರ. ವಾರ್ತೆ ಟಿ ತುರುವೇಕೆರೆ ಟಿ ಮಾ.4
ಇವರು ಹಾಗೂ ಇವರ ಸಂಗಡಿಗರು ಪಟ್ಟಣದ ಬಹುಪಾಲು ಮನೆಗೆ ತೆರಳಿ ಕರ ಪತ್ರ ಕೊಟ್ಟು ಕೈ ಮುಗಿದು ಬರುತ್ತಾರೆ, ಆದರೆ ಇವರು ಯಾರಿಗೂ ಮತ ಕೇಳುವುದಿಲ್ಲ. ಕೈಲಿ ಹಿಡಿದಿರುವ ಕರ ಪತ್ರ ನೋಡಿದರೆ ಇವರು ಯಾವುದೋ ಪಕ್ಷದ ಅಭ್ಯರ್ಥಿ ಇರಬಹುದೇನೋ ಎಂಬ ಭಾವನೆ ಬರುತ್ತದೆ. ಆದರೆ ಅವರು ಯಾವುದೇ ಪಕ್ಷಕ್ಕೂ ಸೇರಿದ ಅಭ್ಯರ್ಥಿಯಲ್ಲ. ಬದಲಾಗಿ ಪ್ರಾಮಾಣಿಕವಾಗಿ ಮತ ಚಲಾಯಿಸಿ. ಯಾವುದೇ ಆಸೆ ಆಮಿಷಕ್ಕೆ ಈಡಾಗದೇ ಪವಿತ್ರವಾದ ಮತವನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮನೋಭಾವವಿರುವ ವ್ಯಕ್ತಿಗೆ ನೀಡಿ ಎಂಬ ಭಾವನೆಯೊಂದಿಗೆ ಮನ ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.
ಹೌದು ಇಂತಹ ಕಳಕಳಿಯುಳ್ಳ ಕರಪತ್ರವನ್ನ ವಿತರಣೆ ಮಾಡುತ್ತಿರುವವರು ತಾಲೂಕಿನ ಕಣತೂರು ಗ್ರಾಮದ ನಿವಾಸಿ ಚೇತನ್ ರಂಗನಾಥ್. ಇವರು ವೃತ್ತಿಯಲ್ಲಿ ಸಾಫ್ಟ್ ವೇರ್ ಕಂಪನಿಯ ಎಂಜಿನಿಯರ್. ಇವರಿಗೂ ಈ ಪಟ್ಟಣದಲ್ಲಿ ನಡೆಯುತ್ತಿರುವ ಚುನಾವಣೆಗೂ ಏನೇನೂ ಸಂಬಂಧವಿಲ್ಲ. ಆದರೆ ಚುನಾವಣೆ ಎಂದರೆ ಕೇವಲ ಹಣ, ಹೆಂಡ ಹಾಗೂ ಇತರೆ ಆಮಿಷಗಳ ಮಹಾಪೂರ. ಇದರಿಂದಾಗಿ ಪ್ರಾಮಾಣಿಕವಾಗಿ ಆಡಳಿತ ಮಾಡುವ ಕನಸು ಕಾಣುವ ಹತ್ತಾರು ಮಂದಿ ಚುನಾವಣೆಯ ಬಿಸಿಗೆ ಸುಟ್ಟು ಹೋಗುತ್ತಾರೆ ಎಂಬ ನೋವಿನಿಂದ ಬಣ್ಣದಲ್ಲಿ ಮುದ್ರಿತಗೊಂಡಿರುವ ಕರ ಪತ್ರಗಳನ್ನು ತಮ್ಮ ಸ್ನೇಹಿತರಾದ ಭರತ್, ಗುರುಮೂರ್ತಿ, ಸೂರಿ ಹಾಗೂ ಪ್ರಶಾಂತ್ ಅವರ ಸಂಗಡ ಮನ ಮನೆಗೆ ತೆರಳಿ ಪ್ರಾಮಾಣಿಕವಾದ ವ್ಯಕ್ತಿಗಳಿಗೆ ಮತ ನೀಡಿ ಎಂದು ಅಂಗಲಾಚುತ್ತಿದ್ದಾರೆ.
ಪ್ರಾಮಾಣಿಕರಿಗೆ ನೀಡಿ: ಇವರು ಇಂತಹುದೇ ಪಕ್ಷದ ವ್ಯಕ್ತಿಗೆ ಮತ ನೀಡಿ ಎಂದು ಕೇಳುತ್ತಿಲ್ಲ. ಯಾರಿಗೇ ಆಗಲಿ ಪ್ರಾಮಾಣಿಕರಿಗೆ ನೀಡಿ ಎಂಬುವುದೇ ಅವರ ಸಂದೇಶವಾಗಿದೆ. ಮತಕ್ಕಾಗಿ ಹಣ ನೀಡಿದವರಿಂದ ಮುಂದೆ ನಾವೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಭ್ಯರ್ಥಿಯಿಂದ ಆಮಿಷಕ್ಕೊಳಗಾದ ಮತದಾರರೂ ಸಹ ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಎಂಬ ಸಂದೇಶ ಹೊತ್ತ ಕರಪತ್ರವನ್ನು ಚೇತನ್ ರಂಗನಾಥ್ ರವರು ವಿತರಣೆ ಮಾಡುತ್ತಿದ್ದಾರೆ. ಅವರ ಪ್ರಯತ್ನ ಫಲ ನೀಡುವುದೋ ಇಲ್ಲವೋ ಗೊತ್ತಿಲ್ಲ.