ನ್ಯಾಯಾಲಯ ತೀರ್ಪಿಗೆ ಬದ್ಧ: ಹುಲಿನಾಯ್ಕರ್ ಘೋಷಣೆ
ಕ.ಪ್ರ. ವಾರ್ತೆ ಟಿ ತುಮಕೂರು ಟಿ ಮಾ.4
ತಮ್ಮ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಪಕ್ಕದ ವಿವಾದಿತ 5 ಎಕರೆ ಭೂಮಿ ಕುರಿತಂತೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್ ಇದೇ ಮೊದಲ ಬಾರಿಗೆ ತಮ್ಮ ಹೇಳಿಕೆಯನ್ನು ಹೊರ ಹಾಕಿದ್ದಾರೆ.
ಅವರು ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕಚೇರಿಯಲ್ಲಿ ಏರ್ಪಾಟಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ವೇಳೆ, ಎಂಜಿನಿಯರಿಂಗ್ ಕಾಲೇಜು ಪಕ್ಕದಲ್ಲೇ ತಾವು ನಿರ್ಮಿಸುತ್ತಿರುವ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿರುವ 5 ಎಕರೆ ವಿವಾದಿತ ಜಮೀನು ಕುರಿತಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2010 ರಲ್ಲೇ ಸರ್ಕಾರದಿಂದ ಈ 5 ಎಕರೆ ಜಮೀನು ಸರ್ಕಾರಕ್ಕೆ ಸೇರಿದ್ದು. ಅದನ್ನು ವಾಪಸ್ ನೀಡುವಂತೆ ಆದೇಶ ಮಾಡಲಾಗಿದ್ದರೂ ತಾವೇಕೆ ವಾಪಸ್ ನೀಡಿಲ್ಲ ಎಂಬ ಪ್ರಶ್ನೆಗೆ, ಈ ಜಮೀನು ವಿವಾದ ಸದ್ಯ ನ್ಯಾಯಾಲಯದಲ್ಲಿದೆ. ನಾನೊಬ್ಬ ದೇಶದ ಪ್ರಜೆ. ಕಾನೂನು ಗೌರವಿಸುವ ವ್ಯಕ್ತಿ. ನ್ಯಾಯಾಲಯದ ತೀರ್ಪಿಗೆ ಬದ್ದವಾಗಿರುವುದಾಗಿ ಹುಲಿನಾಯ್ಕರ್ ತಿಳಿಸಿದರು.
ಜೆಡಿಎಸ್ ಪ್ರಣಾಳಿಕೆ ಬಿಡುಗಡೆ: ತುಮಕೂರು ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ತುಮಕೂರು ನಗರಕ್ಕೆ ಎರಡನೇ ಹಂತದ ಒಳಚರಂಡಿ ಯೋಜನೆ. ಉಪ್ಪಾರಹಳ್ಳಿ ರೈಲ್ವೆ ಮೇಲ್ಸೇತುವೆ ತ್ವರಿತ ನಿರ್ಮಾಣ ಮತ್ತು ಸಾರ್ವಜಿನಿಕ ಸೇವೆಗೆ ಆದ್ಯತೆ. ಶೆಟ್ಟಿಹಳ್ಳಿ ರೇಲ್ವೆಗೇಡ್ ಅಂಡರ್ಪಾಸ್ ನಿರ್ಮಾಣ. ವಸತಿಹೀನರಿಗೆ ನಿವೇಶನ. ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸುವುದು. ಅವಶ್ಯಕತೆ ಇರುವ ಬಡಾವಣೆಗಳಿಗೆ ನಗರ ಸಾರಿಗೆ ವಿಸ್ತರಣೆ. ನಗರದ ಪ್ರಮುಖ ಸ್ಥಳಗಳಲ್ಲಿ ಮಿನಿ ಮಾರುಕಟ್ಟೆ ನಿರ್ಮಾಣ. ಹಂದಿ, ಕೋತಿ, ನಾಯಿಗಳ ಹಾವಳಿ ತಪ್ಪಿಸುವುದು. ಪಾರ್ಕ್ ಒತ್ತುವರಿ ತೆರವುಗೊಳಿಸುವುದು. ನಿರುದ್ಯೋಗಿ ಯುವ ಜನಾಂಗಕ್ಕೆ ಸ್ವಯಂ ಉದ್ಯೋಗ ತರಬೇತಿಗಾಗಿ ಕೇಂದ್ರ ಸ್ಥಾಪನೆ. ನಗರದ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾದ ಶಾಂತಿಯುತ ವಾತಾವರಣ ನಿರ್ಮಾಣ ಮಾಡಿ, ನಗರಸಭೆ ಆಡಳಿತದಲ್ಲಿ ಸ್ವಚ್ಚ, ಪಾರದರ್ಶಕ ಆಡಳಿತ ನೀಡುವುದು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಕೆ.ಬಿ. ಬೋರೇಗೌಡ, ಜೆಡಿಎಸ್ ವಕ್ತಾರ ಮಲ್ಲಿಕಾರ್ಜುನ್, ರಾಣಿ ಚಂದ್ರಶೇಖರ್, ಟೂಡಾ ಮಾಜಿ ಅಧ್ಯಕ್ಷ ಮಹಮದ್ ಸುಲ್ತಾನ್, ನರಸಿಂಹರಾಜು, ನಗರಸಭೆ ಮಾಜಿ ಅಧ್ಯಕ್ಷ ಜಯರಾಂ ಇತರರು ಉಪಸ್ಥಿತರಿದ್ದರು.